ಕಾರ್ಮಿಕನ ಹತ್ಯೆ: ಆರೋಪಿ ಸೆರೆ

ಕಾಸರಗೋಡು, ಎ.೧೯- ಕಾರ್ಮಿಕನೋರ್ವನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಬಾಗಲಕೋಟೆ ನಿವಾಸಿಯೋರ್ವನನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಾಗಲಕೋಟೆಯ ಉಮೇಶ್ ಗೌಡ (೩೭) ಎಂದು ಗುರುತಿಸಲಾಗಿದೆ. ಕೊಲೆಗೀಡಾದ ಕಾರ್ಮಿಕ ಕರ್ನಾಟಕ ನಿವಾಸಿಯಾಗಿದ್ದರೂ ಈತನ ಗುರುತು ಪತ್ತೆಯಾಗಿಲ್ಲ. ಹೆಸರು ಮತ್ತು ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಕೆಲ ಸಮಯದಿಂದ ಕೋಟಿಕುಳಂ ಪರಿಸರದಲ್ಲಿ ದುಡಿದು ರೈಲ್ವೆ ಪ್ಲಾಟ್ ಫಾರ್ಮ್ ಅಥವಾ ಬಸ್ಸು ನಿಲ್ದಾಣಗಳಲ್ಲಿ ರಾತ್ರಿ ಕಾಲ ಕಳೆಯುತ್ತಿದ್ದರು. ಎಪ್ರಿಲ್ ೧೪ ರಂದು ಉಮೇಶ್ ಗೌಡ ಮತ್ತು ಈ ಕಾರ್ಮಿಕನ ನಡುವೆ ಜಗಳವಾಗಿತ್ತು. ಬಳಿಕ ಕೊಲೆಯಲ್ಲಿ ಕೊನೆಗೊಂಡಿದೆ. ಅಂದು ರಾತ್ರಿ ಕಾಸರಗೋಡಿನಿಂದ ರಾತ್ರಿ ಕೋಟಿಕುಳಂಗೆ ತಲುಪಿದ್ದ ಅಲ್ಲಿನ ಅಂಗಡಿಯ ಪರಿಸರದಲ್ಲಿ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಬಳಿಕ ಇಬ್ಬರ ನಡುವೆ ಜಗಳವಾಗಿದೆ. ಈ ನಡುವೆ ಉಮೇಶ ಗೌಡ ಕಾರ್ಮಿಕನ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಎಪ್ರಿಲ್ ೧೫ ರಂದು ಬೆಳಿಗ್ಗೆ ಕೋಟಿಕುಳಂ ಮಸೀದಿ ಸಮೀಪದ ಅಂಗಡಿ ವರಾಂಡದಲ್ಲಿ ಮೃತದೇಹ ಪತ್ತೆಯಾಗಿದೆ. ಸಮೀಪದ ಸಿಸಿಟಿವಿ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸಿದಾಗ ಗೋಣಿ ಚೀಲವೊಂದರಲ್ಲಿ ಮಲಗಿಸಿ ಓರ್ವ ಮೃತದೇಹವನ್ನು ಎಳೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಈ ದೃಶ್ಯವನ್ನು ಬೆನ್ನಟ್ಟಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಉಮೇಶ್ ಗೌಡ ಕೆಲಸ ಹುಡುಕಿಕೊಂಡು ಕೋಟಿಕುಳಂ ಪರಿಸರಕ್ಕೆ ತಲುಪಿದ್ದು, ಕೂಲಿ ಕೆಲಸ ಮಾಡಿಕೊಂಡು ರಾತ್ರಿ ಅಂಗಡಿ ವರಾಂಡಗಳಲ್ಲಿ ಮಲಗುತ್ತಿದ್ದನು. ಈ ನಡುವೆ ಇಬ್ಬರ ಪರಿಚಯವಾಗಿದ್ದು, ಈ ಪರಿಚಯ ಕೊಲೆಯಲ್ಲಿ ಕೊನೆಗೊಂಡಿದೆ.