ಕಾರ್ಪೋರೇಟ್ ಪರ ನೀತಿ ವಿರೋಧಿಸಿ ನ. ೨೬ ರಾಷ್ಟ್ರವ್ಯಾಪಿ ಚಳುವಳಿ

ಕೋಲಾರ,ನ, ೧೪:ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಕೋವಿಡ್ ಸಂದರ್ಭವನ್ನು ಬಳಸಿಕೊಂಡು ಸಾರ್ವಜನಿಕರ ಹಾಗೂ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಪೊರೇಟ್ ಪರವಾದ ನೀತಿಗಳನ್ನು ಪ್ರತಿರೋಧಿಸಲು ನವೆಂಬರ್ ೨೬ ರಂದು ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ ಅವರು ಕೋವಿಡ್ ಜನರ ಜೀವವನ್ನೇ ಬಲಿ ಪಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ತಿದ್ದುಪಡಿ ಮಾಡಿ ಸುಗ್ರಿವಾಜ್ಞೆಗಳ ಮೂಲಕ ಜಾರಿ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದರು
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಹೊಸ ಆರ್ಥಿಕ ನೀತಿ ಮತ್ತು ಹೊಸ ಕೈಗಾರಿಕಾ ನೀತಿ ಮೂಲಕ ಆರಂಭಿಸಿದ ಖಾಸಗೀಕರಣ ಪ್ರಕ್ರಿಯೆಯನ್ನು ನಂತರ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಮುಂದುವರಿಸಿಕೊಂಡು ಬಂದಿವೆ. ಕೇಂದ್ರ ಸರಕಾರ ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲು ಕೊಡದೇ ರಾಜ್ಯಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸರಕಾರ ಆದಾಯದ ಸಂಸ್ಥೆಗಳನ್ನು ಮಾರಾಟ ಮಾಡಿ ಸಾರ್ವಜನಿಕರನ್ನು ದಿವಾಳಿತನದ ಅಂಚಿಗೆ ತಳ್ಳಿದ್ದಾರೆ ಎಂದು ದೂರಿದರು.
ಕೇಂದ್ರ ಸರಕಾರವಂತೂ ಸಂಸತ್ತಿನಲ್ಲಿ ತಮಗಿರುವ ಬಹುಮತದ ದುರ್ಲಾಭ ಪಡೆದುಕೊಂಡು, ರೈಲ್ವೆ, ಭದ್ರತಾ ವಲಯ, ವಿದ್ಯುತ್, ಬ್ಯಾಂಕಿಂಗ್, ಕಲ್ಲಿದ್ದಲು, ಪೆಟ್ರೋಲಿಯಂ, ಉಕ್ಕು, ಬಿ.ಎಸ್.ಎನ್.ಎಲ್, ವಿಮಾನ ನಿಲ್ದಾಣ, ರಸ್ತೆ ಸಾರಿಗೆ ಸೇರಿದಂತೆ ಇನ್ನಷ್ಟು ವೇಗವಾಗಿ ಸಾರ್ವಜನಿಕ ವಲಯದ ಮತ್ತು ಸರ್ಕಾರಿ ವಲಯದ ಉದ್ದಿಮೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ ಪ್ರತಿರೋಧ ವ್ಯಕ್ತಪಡಿಸುವರನ್ನು ಸರಕಾರವೇ ಕೇಸ್ ಗಳನ್ನು ಹಾಕಿ ದಮನ ಮಾಡುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ದುಡಿಯುವ ಜನತೆ ಪ್ರಬಲ ಚಳವಳಿಗೆ ಮುಂದಾಗ ಬೇಕಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ವಿಜಯಕೃಷ್ಣ ಮಾತನಾಡಿ ಲಾಕ್‌ಡೌನ್ ದುರ್ಬಳಕೆ ಮಾಡಿಕೊಂಡ ಸರ್ಕಾರಗಳು, ಹಲವು ಕಾರ್ಮಿಕರ ಪರ ಇರುವ ನೀತಿಗಳನ್ನು ದುರ್ಬಲಗೊಳಿಸುವ ಮೂಲಕ ಕಾರ್ಮಿಕರ ಭದ್ರತೆಯ ಜೀವನಕ್ಕೆ ಕೊಡಲಿ ಪೆಟ್ಟು ನೀಡಿದೆ. ಸರಕಾರ ಮಾಲೀಕರ ಪರವಾಗಿ ಕೆಲಸ ಮಾಡುತ್ತಾರೆ ಹೊರತು ಕಾರ್ಮಿಕರ ಪರವಾಗಿಲ್ಲ. ಕಾರ್ಮಿಕರ ರಕ್ಷಣೆಗೆ ಇದ್ದ ೪೪ ಕಾನೂನುಗಳನ್ನು ೪ ಕೋಡ್ ಗಳಾಗಿ ಹಿಂದಿನ ಜೀತ ಪದ್ಧತಿಗೆ ಜನರನ್ನು ತಳ್ಳುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಬೆಮಲ್ ಕಾರ್ಮಿಕರ ಸಂಘದ ಅಧ್ಯಕ್ಷ ಅಂಜನೇಯರೆಡ್ಡಿ ಮಾತನಾಡಿ ಕೇಂದ್ರ ಬಿಜೆಪಿ ಸರಕಾರದಿಂದ ಅರಾಜಕತೆ ಸೃಷ್ಠಿಸುತ್ತಿದೆ. ಸಾರ್ವಜನಿಕ ವಲಯಗಳನ್ನು ಮಾರಾಟ ಮಾಡುವುದೇ ಇವರ ಮುಖ್ಯ ಉದ್ದೇಶವಾಗಿದೆ ಇದರ ವಿರುದ್ದ ಕಾರ್ಮಿಕ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಬೇಕಾಗಿದೆ ಎಂದರು
ಸಮಾವೇಶದಲ್ಲಿ ಬಿಎಸ್ ಎನ್ ಎಲ್ ನೌಕರರ ಸಂಘದ ಜಿಲ್ಲಾ ಮುಖಂಡ ನಂದಗೋಪಾಲ್, ಎಐಸಿಟಿಯುಸಿ ಜಿಲ್ಲಾ ಮುಖಂಡ ಪ್ರಭಾಕರನ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಮುಖಂಡೆ ಈಶ್ವರಮ್ಮ,ಎಂ ಭೀಮರಾಜ್, ಶಿವಾನಂದ ಮುಂತಾದವರು ಇದ್ದರು.