ಕಾರ್ತೀಕ ಮಾಸದ ಸಮಾರೋಪ ಸಮಾರಂಭ ಹಾಗೂ ಮಹಾರಥೋತ್ಸವ

ಕೆಂಭಾವಿ :ಡಿ.9:ಪಟ್ಟಣದ ಸಂಜೀವ ನಗರದ ಸಂಜೀವಾಂಜನೇಯ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಬಾಳಕೃಷ್ಣರಾವ ಕುಲಕರ್ಣಿ ನೇತೃತ್ವದಲ್ಲಿ ಛಟ್ಟಿ ಉತ್ಸವ, ಕಾರ್ತೀಕ ಮಾಸದ ಸಮಾರೋಪ ಸಮಾರಂಭ ಹಾಗೂ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ಬುಧವಾರ ಸಂಜೆ ಉತ್ಸಾಹದಿಂದ ನೆರವೇರಿತು. ಸಂಪ್ರದಾಯದಂತೆ ಮುಂಜಾನೆಯಿಂದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿ ಸಾಯಂಕಾಲದವರೆಗೆ ಅನೇಕ ಚಟುವಟಿಕೆಗಳು ನಡೆದವು.

ಸಾಯಂಕಾಲ ಆರು ಘಂಟೆಗೆ ಶೃಂಗಾರಗೊಂಡಿದ್ದ ರಥದಲ್ಲಿ ಆಂಜನೇಯ ಮೂರ್ತಿಯನ್ನಿಟ್ಟು ಮೇಲೆ ಶಿಖರ ಏರುತ್ತಿದ್ದಂತೆ ಭಕ್ತರ ಜಯಕಾರ ಮುಗಿಲು ಮುಟ್ಟಿತು. ಮಕ್ಕಳು, ವೃದ್ಧರು, ಮಹಿಳೆಯರು ಹೊಸ ಬಟ್ಟೆಗಳನ್ನುಟ್ಟು ದೇವಸ್ಥಾನದ ಪ್ರಾಂಗಣದಲ್ಲಿ ಮಧ್ಯಾಹ್ನ ಮೂರು ಘಂಟೆಯಿಂದಲೆ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥೋತ್ಸವದ ನಂತರ ಭಕ್ತರು ಸರದಿಯಲ್ಲಿ ನಿಂತು ಆಂಜನೇಯ ಹಾಗೂ ಕಾಶಿ ವಿಶ್ವನಾಥ ದೇವರ ದರ್ಶನ ಪಡೆದರು, ತೇರಿಗೆ ಹಿಡಿಗಾಯಿಗಳನ್ನು ಒಡೆದು ಹರಕೆ ತೀರಿಸಿದರು. ಕೆಂಭಾವಿ ಸೇರಿದಂತೆ ಸುಮುತ್ತಲಿನ ಅನೇಕ ಗ್ರಾಮಗಳ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಸರ್ವೇಸಾಮನ್ಯವಾಗಿತ್ತು.