ಕಾರ್ತಿಕ ರೆಡ್ಡಿಗೆ ನಟ ಹಣ್ಮು ಪಾಜಿ ಸನ್ಮಾನ

ಬೀದರ್:ನ.22: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ 9ನೇ ರ್ಯಾಂಕ್ ಗಳಿಸಿದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ರೆಡ್ಡಿ ಅವರನ್ನು ಜಿಲ್ಲೆಯವರೇ ಆದ ಚಲನಚಿತ್ರ ನಟ ಹಣ್ಮು ಪಾಜಿ ಸನ್ಮಾನಿಸಿದರು.
ಸ್ನೇಹಿತರ ಬಳಗದೊಂದಿಗೆ ನಗರದ ಕಾರ್ತಿಕ ರೆಡ್ಡಿ ಅವರ ಮನೆಗೆ ತೆರಳಿದ ಅವರು, ಶಾಲು ಹೊದಿಸಿ, ಸಿಹಿ ತಿನ್ನಿಸಿ ಅಭಿನಂದಿಸಿದರು.
ಕಾರ್ತಿಕ ರೆಡ್ಡಿ ಅವರು ಅಖಿಲ ಭಾರತ ಮಟ್ಟದಲ್ಲಿ 9ನೇ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆಯುವ ಮೂಲಕ ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಜಿಲ್ಲೆ ಶೈಕ್ಷಣಿಕವಾಗಿ ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಈಗ ಬೀದರ್‍ನತ್ತ ಹೆಜ್ಜೆ ಹಾಕುತ್ತಿರುವುದು ಹೆಮ್ಮೆ ಉಂಟು ಮಾಡಿದೆ ಎಂದು ತಿಳಿಸಿದರು.
ಇಂದು ಸಾಧನೆಗೆ ಬಹಳಷ್ಟು ಅವಕಾಶಗಳು ತೆರೆದುಕೊಂಡಿವೆ. ವೈದ್ಯಕೀಯ, ಎಂಜಿನಿಯರಿಂಗ್ ಜತೆಗೆ ಇರುವ ಇತರ ಕೋರ್ಸ್‍ಗಳತ್ತಲೂ ಗಮನ ಹರಿಸಬೇಕು. ಕೆಎಎಸ್, ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ತಂದೆ ರಾಮರೆಡ್ಡಿ, ಲೋಕೇಶ ಮೇತ್ರೆ, ಕುಮಾರ ನಿಜಾಂಪುರ, ರಾಜ್ ಟಗರು, ನಾಮದೇವ ಗುಂಪಾ, ನರಸಿಂಗ್‍ರಾಜ್, ಮಹೇಶ ಸೋಲಪುರ, ಅಂಬುಜೆ, ಅನಿಲ ಸೋಳಂಕೆ, ಅನಂತ ರೆಡ್ಡಿ ಇದ್ದರು.