ಕಾರ್ತಿಕ ಮಾಸದ ಪ್ರಯುಕ್ತ ಅಮರೇಶ್ವರರ ಪಲ್ಲಕ್ಕಿ ಮೆರವಣಿಗೆ

ಔರಾದ :ನ.20: ಮಾಸಗಳಲ್ಲೇ ಕಾರ್ತಿಕ ಮಾಸ ಶ್ರೇಷ್ಠ ಮಾಸ. ಅಂಧಕಾರವನ್ನು ದೂರ ಮಾಡೋ ಮಾಸ, ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ್ ಮಾಸದ ಪ್ರಯುಕ್ತ ನಗರದ ಶ್ರೀ ಉದ್ಭವಲಿಂಗ ಅಮರೇಶ್ವರ ಮಂದಿರದಲ್ಲಿ ಶಿವ ಸಪ್ತಾಹ ಜರುಗಿತು. ಸತತ ಏಳು ದಿನಗಳ ಕಾಲ ನಡೆದುಕೊಂಡು ಬಂದ ವಿಶೇಷ ಪೂಜೆ, ಭಜನೆ ಹಾಗೂ ಕೀರ್ತನೆ ಕಾರ್ಯಕ್ರಮ ಶುಕ್ರವಾರ ಹುಣ್ಣಿಮೆಯಂದು ಉದ್ಭವಲಿಂಗ ಅಮರೇಶ್ವರರ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಪ್ತಾಹ ಸಮಾರೋಪಗೊಂಡಿತು.

ಉದ್ಭವಲಿಂಗ ಅಮರೇಶ್ವರ ಉತ್ಸವ ಮೂರ್ತಿ ಮತ್ತು ಪಲ್ಲಕ್ಕಿ ಮೆರವಣಿಗೆ ನಗರದ ವಿವಿಧ ಬಡಾವಣೆಗಳ ಮೂಲಕ ಸಕಲ ವಾದ್ಯಗಳೊಂದಿಗೆ ವಿಜ್ರಂಭಣೆಯಿಂದ ಜರುಗಿತು. ಮಾತೆಯರು ಮನೆ ಅಂಗಳ ಶುಚಿಗೊಳಿಸಿ ರಂಗೋಲಿ ಹಾಕಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಕಾಯಿ ಕರ್ಪೂರ ಅರ್ಪಿಸ ಹೊದಿಕೆಗಳನ್ನು ಅರ್ಪಣೆ ಮಾಡಿ ಭಕ್ತಿ ಭಾವ ಮೆರೆದರು.