ಕಾರ್ತಿಕ ಮಾಸದ ದೀಪೋತ್ಸವಕ್ಕೆ ಚಾಲನೆ

ಹುಳಿಯಾರು, ನ. ೨೦- ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಹುಳಿಯಾರಮ್ಮ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯ ಸೇರಿದಂತೆ ಕೆಂಚಮ್ಮ, ಬನಶಂಕರಿ, ಆಂಜನೇಯ ಸ್ವಾಮಿ, ಮಲ್ಲೇಶ್ವರ ಸ್ವಾಮಿ, ಶನೈಶ್ವರ ಸ್ವಾಮಿ, ಪ್ರಸನ್ನ ಗಣಪತಿ, ಉಣ್ಣೆ ಬಸವಣ್ಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಪ್ರತಿ ವರ್ಷವೂ ಅದ್ದೂರಿಯಾಗಿ ನೂರಾರು ಭಕ್ತರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಕಾರ್ತಿಕ ದೀಪೋತ್ಸವ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಯಿತು.
ಎಲ್ಲಾ ದೇವಾಲಯಗಳಲ್ಲೂ ಸಂಜೆ ದೇವರುಗಳನ್ನು ವಿಶೇಷವಾಗಿ ಅಲಂಕರಿಸಿದಲ್ಲದೇ ದೇವಾಲಯಗಳನ್ನು ದೀಪಗಳಿಂದ ಬೆಳಗಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸಂಜೆ ವಾದ್ಯದ ಹಿಮ್ಮೇಳದಲ್ಲಿ ದೀಪದ ಕಂಬಕ್ಕೆ ಪೂಜೆ ಸಲ್ಲಿಸಿ ದೀಪ ಏರಿಸುವುದರ ಮೂಲಕ ಒಂದು ತಿಂಗಳ ಕಾಲದ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಎಲ್ಲಾ ದೇವಾಲಯಗಳಲ್ಲೂ ಕಾರ್ತಿಕ ಮಾಸದ ಪೂರ ಒಂದು ತಿಂಗಳುಗಳ ಕಾಲ ನಿತ್ಯ ಅಭಿಷೇಕ, ಸಂಜೆ ವಿಶೇಷ ಅಲಂಕಾರ, ಭಜನೆ ದೀಪಾಲಂಕಾರ ನಡೆಯಲಿದ್ದು ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರುಗಳ ದರ್ಶನ ಪಡೆಯುವಂತೆ ಸಮಿತಿಯವರು ಮನವಿ ಮಾಡಿದ್ದಾರೆ.
ಆಯಾ ದೇವಸ್ಥಾನಗಳಲ್ಲಿ ದೇವಾಲಯ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.