ಕಾರ್ತಿಕೋತ್ಸವ ಸಮಾರಂಭ


ಲಕ್ಷ್ಮೇಶ್ವರ,ಡಿ.10: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ' ಎಂದು ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಚರಮೂರ್ತೀಶ್ವರ ಸೇವಾ ಟ್ರಸ್ಟ್ ಹಾಗೂ ಗ್ರಾಮದ ಭಕ್ತರ ಸಹಯೋಗದಲ್ಲಿ ನಡೆದ ಚರಮೂರ್ತೀಶ್ವರರ 9ನೇ ವರ್ಷದ ಕಾರ್ತಿಕೋತ್ಸವ ಸಮಾರಂಭದ ನೇತೃತ್ವ ವಹಿಸಿಕೊಂಡು ಅವರು ಮಾತನಾಡಿದರು. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಕಾರ್ತಿಕೋತ್ಸವ ಸಡಗರ ಸಂಭ್ರಮದಿಂದ ಜರುಗುತ್ತದೆ. ದೇವರ ಮುಂದೆ ದೀಪ ಹಚ್ಚುವಾಗ ಮನಸ್ಸಿನ ಅಜ್ಞಾನ ದೂರ ಆಗಲಿ ಎಂಬುದೇ ಕಾರ್ತಿಕೋತ್ಸವದ ಉದ್ಧೇಶ. ಮೂಢನಂಬಿಕೆಗಳನ್ನು ಕಳೆದ ಅಜ್ಞಾನ ದೂರಾಗಲಿ ಎಂಬ ದೃಷ್ಟಿ ಇಟ್ಟುಕೊಂಡು ಕಾರ್ತಿಕ ಮಾಸ ಆಚರಿಸಲ್ಪಡುತ್ತದೆ’ ಎಂದರು.
ಸಾನಿಧ್ಯ ವಹಿಸಿದ್ದ ಗಂಜಿಗಟ್ಟಿ ಚರಮೂರ್ತೀಶ್ವರಮಠದ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ `ಧರ್ಮ ದೇವರಲ್ಲಿ ನಂಬಿಕೆ ಇರಬೇಕು. ಯಾವುದೋ ಒಂದು ಅಗೋಚರ ಶಕ್ತಿ ಈ ಜಗತ್ತನ್ನು ನಡೆಸುತ್ತಿದೆ. ಅಧ್ಯಾತ್ಮವನ್ನು ಅರಿಯುವುದರ ಮೂಲಕ ಆ ಶಕ್ತಿ ಹತ್ತಿರಕ್ಕೆ ಹೋಗಲು ಸಾಧ್ಯ. ಈ ನಿಟ್ಟಿನಲ್ಲಿ ಧರ್ಮ ಮತ್ತು ದೇವರಲ್ಲಿ ನಂಬಿಕೆ ಇಟ್ಟುಕೊಂಡು ಉತ್ತಮ ಕೆಲಸ ಮಾಡಿದರೆ ನಮ್ಮ ಜೀವನ ಪಾವನ ಆಗುತ್ತದೆ’ ಎಂದರು.
ಟ್ರಸ್ಟ್‍ನ ಅಧ್ಯಕ್ಷ ದ್ಯಾಮನಗೌಡ ಕರಿಭರಮನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಅಂತೂರ-ಬೆಂತೂರು ಬೂದಿಸ್ವಾಮಿ ಹಿರೇಮಠದ ಕೃಷಿಋಷಿ ಕುಮಾರ ದೇವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಎಸ್.ಜಿ. ಭರಮಗೌಡ್ರ, ಚೆನ್ನವೀರಯ್ಯ ಹಿರೇಮಠ, ಫಕ್ಕೀರಗೌಡ ಪಾಟೀಲ, ಬಿ.ಎಸ್. ಪಾಟೀಲ, ಬಸನಗೌಡ ಪೊಲೀಸ್‍ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಆರ್.ಬಿ. ಪಾಟೀಲ, ಹುಲಿಗೆಪ್ಪ ಕರೆಣ್ಣವರ, ಕೆಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದಗೌಡ ಪಾಟೀಲ, ಚರಂತಯ್ಯ ಹಿರೇಮಠ, ಬಸನಗೌಡ ಪಿಡ್ಡನಗೌಡ್ರ, ಸುರೇಶ ಬಸಾಪುರ ಸೇರಿದಂತೆ ಊರಿನ ಗುರು ಹಿರಿಯರು ಇದ್ದರು. ರಘುನಾಥಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರಭುಗೌಡ ಸೂರಣಗಿ ಸ್ವಾಗತಿಸಿದರು.