ಕಾರ್ಗಿಲ್ ವಿಜಯೋತ್ಸವ-ಗೌರವ ಅರ್ಪಣೆ

ಕೋಲಾರ,ಜು.೨೭: ಕೋಲಾರದ ರೈಲ್ವೆ ನಿಲ್ದಾಣದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಕೋಲಾರ ಕ್ರೀಡಾ ಸಂಸ್ಥೆ ವತಿಯಿಂದ ನಡೆಯುತ್ತಿರುವ ಅಗ್ನಿವೀರರಾಗಲು ಯೋಧರ ತರಬೇತಿ ಶಿಕ್ಷಣಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ೪.೫ ಕಿ.ಮೀ ಪಥಸಂಚಲನ ನಡೆಸಿ ಗೌರವ ಅರ್ಪಿಸಲಾಯಿತು.
ವಿಜಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದ ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಸೈನಿಕ ಜನಾರ್ಧನ್ ಮಾತನಾಡಿ, ಸೈನಿಕರು ತಮ್ಮ ಜೀವದ ಹಂಗು ತೊರೆದು ಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ನಿಜಕ್ಕೂ ಅದು ರೋಮಾಂಚನ ಹಾಗೂ ದೇಶಭಕ್ತಿಯ ಸಂಕೇತವಾಗಿದ್ದು, ನಮಗೆ ಸಾವಿನ ಭಯ ಕಾಡುವುದಿಲ್ಲ ಎಂದು ತಿಳಿಸಿದರು.
ಯುವಕರುಹೆಚ್ಚಿನ ಸಂಖ್ಯೆಯಲ್ಲಿ ಯೋಧರಾಗಲು ಮುಂದೆ ಬನ್ನಿ ಎಂದು ಕರೆ ನೀಡಿದ ಅವರು, ಸರ್ಕಾರಗಳು ಯೋಧರು ನಿವೃತ್ತರಾದ ನಂತರ ನೀಡಬೇಕಾದ ಸೌಲಭ್ಯ ಒದಗಿಸಲು ಅಲೆಸಬಾರದು ಅವರನ್ನು ಗೌರವದಿಂದ ಕಾಣಬೇಕು ಎಂದರು.
ಮೆರವಣಿಗೆ ಮಹಿಳಾ ಸಮಾಜ ವೃತ್ತ, ಬಂಗಾರಪೇಟೆ ವೃತ್ತ, ಕಾಲೇಜು ವೃತ್ತ, ಮೆಕ್ಕೆ ವೃತ್ತ, ಅಮ್ಮವಾರಿಪೇಟೆ, ಬಸ್‌ನಿಲ್ದಾಣ, ಕ್ಲಾಕ್ ಟವರ್, ಡೂಂಲೈಟ್ ವೃತ್ತದ ಮೂಲಕ ರೈಲ್ವೆ ನಿಲ್ದಾಣದವರೆಗೂ ಧ್ವಜಗಳನ್ನಿಡಿದು ಮೆರವಣಿಗೆ ನಡೆಸಲಾಯಿತು.
ಸಂಜೆ ಗಾಂಧಿವನದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ೫೨೭ ಯೋಧರಿಗೆ ಮೇಣದ ಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಲಾರ ಕ್ರೀಡಾಸಂಘದ ಓಂಶಕ್ತಿ ಚಲಪತಿ,ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಪುರುಷೋತ್ತಮ್, ಕ್ರೀಡಾಸಂಘದ ಅಧ್ಯಕ್ಷ ಸಾ.ಮಾ.ಅನಿಲ್‌ಬಾಬು, ತರಬೇತಿ ದಾರರಾದ ಮಾಜಿ ಸೈನಿಕರಾದ ಕೃಷ್ಣಮೂರ್ತಿ, ಸುರೇಶ್‌ಬಾಬು, ನಾಗರಾಜಾ ಸ್ಟೋರ್‍ನ ಸುಬ್ರಮಣಿ ಮತ್ತಿತರರು ಭಾಗವಹಿಸಿದ್ದರು.