ಕಾರ್ಖಾನೆ ಶೀಘ್ರ ಆರಂಭಿಸಿ-ಬೆಲೆ ಹೆಚ್ಚು ಮಾಡಿ: ಮುಲ್ಲಾ

ಆಳಂದ:ನ.9: ಕಬ್ಬು ಬೆಳೆಗಾರ ಸಾವಿರಾರು ರೈತರ ಹಿತಾಸಕ್ತಿ ಗಮನದಲ್ಲಿಟ್ಟು ಭೂಸನೂರ ಸಕ್ಕರೆ ಕಾರ್ಖಾನೆ ಬೇಗ ಕಬ್ಬು ನುರಿಸೋದನ್ನ ಪ್ರಾರಂಭಿಸಬೇಕು ಎಂದು ಅಖಿಲಭಾರತ ಕಿಸಾನಸಭಾ ರಾಜ್ಯ ಸಂಚಾಲಕ ಮೌಲಾ ಮುಲ್ಲಾ ಅವರು ಇಂದಿಲ್ಲಿ ಒತ್ತಾಯಿಸಿದರು.

ಪಟ್ಟಣದಲ್ಲಿ ಲಿಂಗಾಯತ ಭವನದ ಬಳಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರು ಕಾರ್ಖಾನೆ ಮುಂದೆ ಹೋರಾಟಕ್ಕೆ ಕುಳಿತು ಕಾಲಹರಣ ಮಾಡದೆ ತಮ್ಮದೇ ಆಡಳಿತವಿರುವುದರಿಂದ ಜಿಲ್ಲಾಡಳಿತ, ಸರ್ಕಾರದ ಹಂತದಲ್ಲಿ ಬೇಗ ಕಾರ್ಖಾನೆ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಅವರು ಒತ್ತಾಯಿಸಿದರು. ಪ್ರತಿ ಟನ್ ಗೆ ಕಬ್ಬಿಗೆ ? 3400 ನೀಡಬೇಕೆಂದು ಅವರು ಇದೇ ವೇಳೆಯಲ್ಲಿ ಆಗ್ರಹಿಸಿದರು. ಈ ವೇಳೆ ಕಲ್ಯಾಣಿ ತುಕ್ಕಾಣಿ, ಯುವ ಮುಖಂಡ ಅಶ್ಪಾಕ್ ಮುಲ್ಲಾ ಇದ್ದರು.

ಮಲತಾಯಿ ಧೋರಣೆ ಮಾಡಬೇಡಿ: ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರು ಕ್ಷೇತ್ರವ್ಯಾಪ್ತಿಯ ರೈತರ ಕಬ್ಬು ಪಡೆದಿದ್ದು ಕಳೆದ ವರ್ಷದ ಬಾಕಿ ಪ್ರತಿಟನ್‍ನ 50 ರೂಪಾಯಿ ಪಾವತಿಸಬೇಕು ಹಾಗೂ ಕ್ಷೇತ್ರ ವ್ಯಾಪ್ತಿಯ ಎಲ್ಲ ರೈತರ ಕಬ್ಬು ನುರಿಸಬೇಕು ಮಲತಾಯಿ ಧೋರಣೆ ಅನುಸರಿಸಬೇಡಿ ಎಂದು ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ .ಎಸ್. ಪಾಟೀಲ್ ಧಂಗಾಪೂರ ಒತ್ತಾಯಿಸಿದರು. ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ಬಾರಿ ಪ್ರತಿಟನ್ ಕಬ್ಬಿಗೆ 2350 ನೀಡುವುದಾಗಿ ಹೇಳಿ 2300 ಪಾವತಿಸಿದ್ದು ಮತ್ತೆ 50 ರೂಪಾಯಿ ಆಳಂದ, ಅಫಜಲ್‍ಪೂರ ತಾಲೂಕುಗಳಿಗೆ ಮಾತ್ರ ಪಾವತಿಸಿದ್ದು, ಕಲಬುರಗಿ, ಕಮಲಾಪೂರ ತಾಲೂಕಿನ ರೈತರಿಗೂ ಏಕೆ ಪಾವತಿಸಿಲ್ಲ ತಾರತಮ್ಯ ಮಾಡದೆ ಅವರಿಗೂ ಹಣ ಖಾತೆಗೆ ಜಮಾ ಮಾಡಬೇಕು ಎಂದು ಅವರು ಹೇಳಿದರು. ಕಾರ್ಖಾನೆ ನಿರ್ದೇಶಕ ಶಿವರಾಜ ಮಹಾಗಾಂವ, ಧರ್ಮರಾಜ ಸಾಹು, ಪ್ರಕಾಶ ಸಣಮನಿ, ಹರ್ಷವರ್ಧನ ಗುಗ್ಗಳೆ, ನೀಲಕಂಠರಾವ ಪಾಟೀಲ್, ಶಾಂತೇಶ ಪಾಟೀಲ್ ಹೊದಲೂರ, ಶಿವಪುತ್ರಪ್ಪ ಕೊಟ್ಟರಕಿ ಕಡಗಂಚಿ, ಸನ್ನಬಸಪ್ಪ ಪಾಟೀಲ್, ಶಂಕರ ಸೋಮಾ, ರೇಣುಕಾ ಹಾವನಳ್ಳಿ, ಕಮಲಾಬಾಯಿ ಸಕ್ಕರಗಿ ಇದ್ದರು.