
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ,1- ಇಂದು ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಕಾರ್ಮಿಕರು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿರುವುದು ಹಾಗೂ ದುಡಿಮೆಯ ಅವಧಿಯನ್ನು ದಿನಕ್ಕೆ 12 ಗಂಟೆಗಳವರೆಗೂ ವಿಸ್ತರಿಸಲು ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಯುಟಿಯುಸಿಯ ಜಿಲ್ಲಾಧ್ಯಕ್ಷರಾದ ಎಂ.ದೇವದಾಸ್ ಮಾತನಾಡುತ್ತಾ ” ಕಾರ್ಖಾನೆಗಳ ನಿಯಮಗಳನ್ನು ತಿದ್ದುಪಡಿ ಮಾಡಿದ ಮಸೂದೆಯನ್ನು ಸದನದಲ್ಲಿ ಏಕಾಏಕಿಯಾಗಿ ಮಂಡಿಸಿ ಅಂಗೀಕರಿಸಿರುವುದು ಅತ್ಯಂತ ಜನತಂತ್ರ ವಿರೋಧಿಯು ಹಾಗೂ ಕಾರ್ಮಿಕ ವಿರೋಧಿ ನಡೆಯಾಗಿದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕ ಕಾರ್ಖಾನೆಗಳ ತಿದ್ದುಪಡಿ ಮಸೂದೆ 2026 ನಿಜಕ್ಕೂ ರಾಜ್ಯ ಸರ್ಕಾರವು ಕಾರ್ಮಿಕರನ್ನು ಮಾಲೀಕರ ನಿರ್ದಯ ಶೋಷಣೆ ಹಾಗೂ ಕಿರುಕುಳಗಳಿಗೆ ದೂಡುವುದಲ್ಲದೇ ಮತ್ತೇನು ಅಲ್ಲ” ಎಂದರು.
ಮಹಿಳೆಯರ ಸುರಕ್ಷತೆ ಬಗ್ಗೆ ಈಗಾಗಲೇ ಹಲವಾರು ಕಾಯ್ದೆ ಕಾನೂನುಗಳಿದ್ದಾಗಿಯೂ ಸಹ ಮಹಿಳೆಯರ ಮೇಲಿನ ಅಪರಾಧಗಳು ಮೇರೆಮೀರಿದ್ದು ರಾತ್ರಿ ಪಾಳಿಯಿಂದಾಗಿ ಇನ್ನಷ್ಟು ಅಭದ್ರತೆ, ಅಸುರಕ್ಷತೆಗೆ ಹೆಣ್ಣು ಮಕ್ಕಳನ್ನು ತಳ್ಳಿದಂತಾಗುತ್ತದೆ ಹಾಗೂ ಹೆಣ್ಣು ಮಕ್ಕಳ ಮೇಲಿನ ಅಪರಾಧಗಳಿಗೆ ಬಲಿಪಶುವಾಗುವಂತಹ ಪರಿಸ್ಥಿತಿಗೆ ದೂಡಿದಂತಾಗುತ್ತದೆ. ಇದು ತಾಯಂದಿರಾದ ಮಹಿಳಾ ಕಾರ್ಮಿಕರಿಗೆ ಹಾಗೂ ಕೌಟುಂಬಿಕ ನಿರ್ವಹಣೆಯ ಹೊಣೆ ಹೊಂದಿರುವ ಒಬ್ಬಂಟಿ ಮಹಿಳೆಯರಿಗೆ ಕೌಟುಂಬಿಕ ಬಿಕ್ಕಟ್ಟಿಗೆ ಇನ್ನಷ್ಟು ಎಡೆ ಮಾಡಿಕೊಡುತ್ತದೆ. ವಾಸ್ತವದಲ್ಲಿ ದುಡಿಯುವ ಹೆಣ್ಣುಮಕ್ಕಳು ಒಂದೋ ಅನಿವಾರ್ಯವಾಗಿ ರಾತ್ರಿ ಪಾಳಿ ಒಪ್ಪಕೊಳ್ಳುವ ಮೂಲಕ ಇನ್ನಷ್ಟು ಅಭದ್ರತೆಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು ಇಲ್ಲವೇ ಕೆಲಸ ಬಿಡಬೇಕು ಎಂಬಂತಾಗುತ್ತದೆ. ” ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ಎಂ.ಶಾಂತಾ ಅವರು “ಸದನದಲ್ಲಿ ವಿರೋಧ ಪಕ್ಷವು ಸೇರಿದಂತೆ ಎಲ್ಲಾ ಪಕ್ಷಗಳು ಯಾವೊಂದು ಆಕ್ಷೇಪಣೆಯನ್ನು ತೋರದಿರುವುದು ಅತ್ಯಂತ ವಿಷಾದಕರವಾಗಿದ್ದು, ಎಲ್ಲಾ ಪಕ್ಷಗಳು ಬಂಡವಾಳಶಾಹಿ ಪಕ್ಷಗಳೇ ಎಂಬುದನ್ನು ಇದು ಸಾಬೀತು ಪಡಿಸುತ್ತದೆ ಅಲ್ಲದೇ ಅಂತಿಮವಾಗಿ ಮಾಲಿಕವರ್ಗಕ್ಕೆ ಅವರ ನಿಷ್ಠೆಯೇ ಹೊರತು ದುಡಿಯುವ ಜನರಿಗಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ” ಎಂದರು.
ಮುಖಂಡರಾದ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಸೋಮಶೇಖರ್ ಗೌಡ, ಸುರೇಶ್,ಶರ್ಮಾಸ್,ಯರಿಸ್ವಾಮಿ, ಲಕ್ಷ್ಮಿ, ಚಿಟ್ಟೆಮ್ಮ, ಉಮಾಮಹೇಶ, ಮುರಳಿ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.