ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಹಲವರಿಗೆ ಗಾಯ

ಬೆಂಗಳೂರು, ಸೆ.24- ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿನ ಲೇಕ್ ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ.
ಲೇಕ್ ಕೆಮಿಕಲ್ ಕಂಪನಿಯಲ್ಲಿ ಇಂದು ಮಧ್ಯಾಹ್ನ ಊಟದ ವೇಳೆ ಬಾಯ್ಲರ್ ಸ್ಫೋಟಗೊಂಡು ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಕಾರ್ಖಾನೆಯಲ್ಲಿ ಉಂಟಾಗಿದ್ದ ಬೆಂಕಿ ನಂದಿಸಿದೆ.ಸ್ಫೋಟದ ತೀವ್ರತೆಗೆ ಕಾರ್ಖಾನೆಯಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. 33 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಕಾರ್ಖಾನೆ ಇದಾಗಿದೆ. ಇಲ್ಲಿಯವರೆಗೆ ಈ ಕಾರ್ಖಾನೆಯಲ್ಲಿ ನಾಲ್ಕು ಬಾರಿ ಬಾಯ್ಲರ್ ಸ್ಫೋಟಗೊಂಡಿದೆ. ಇಲ್ಲಿ ಬಲ್ಕ್ ಡ್ರಗ್ ಕಚ್ಚಾ ಕೆಮಿಕಲ್ ತಯಾರಿಸುತ್ತಿದ್ದು, ಮುಖ್ಯ ಕಾರ್ಖಾನೆಗಳಿಗೆ ರವಾನಿಸಲಾಗುತ್ತಿತ್ತು.ಅತ್ತಿಬೆಲೆ ವಡ್ಡರಪಾಳ್ಯದ ಜನತೆ ಕಾರ್ಖಾನೆ ಹೊರಸೂಸುವ ದುರ್ನಾತ ಹಾಗೂ ಶಬ್ದ ಮಾಲಿನ್ಯದಿಂದ ಬೇಸತ್ತು ಕಾರ್ಖಾನೆ ಸ್ಥಳಾಂತರಕ್ಕೆ ನೂರಾರು ಅರ್ಜಿಗಳನ್ನು ಕೊಟ್ಟಿದ್ದರು. ಆದ್ರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.