ಕಾರ್ಖಾನೆಯಲ್ಲಿ ಅಗ್ನಿ ಅವಘಡ ಪ್ರಕರಣ: ರಾಸಾಯನಿಕ ಪದಾರ್ಥಗಳ ಸ್ಥಳಾಂತರ

ಮಂಗಳೂರು, ಎ.2೬- ಮಂಗಳೂರು ಎಸ್‌ಇಝಡ್ ಕಾರಿಡಾರಿನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅನಾಹುತದಿಂದ ಹಾನಿಗೊಳಗಾಗಿರುವ ‘ಕ್ಯಾಟಸಿಂತ್’ ಸುಗಂಧ ದ್ರವ್ಯ ಫ್ಯಾಕ್ಟರಿಯಲ್ಲಿ ಬಾಕಿ ಉಳಿದ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಿನ್ನೆ ನಡೆಯಿತು. ಮಂಗಳೂರಿನ ಅಗ್ನಿಶಾಮಕದಳ ಹಾಗೂ ಎಸ್‌ಇಝಡ್‌ನ ಅಗ್ನಿಶಾಮಕ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಾಂತರಿಸಲಾಯಿತು.

ಅಗ್ನಿ ಅನಾಹುತದಿಂದ ಘಟಕದ ಕೆಲವೆಡೆ ವಾಲ್ವ್‌ಗಳಲ್ಲಿ ರಾಸಾಯನಿಕ ಪದಾರ್ಥಗಳ ಸೋರಿಕೆ ರಾತ್ರಿಯಿಡೀ ಆಗುತ್ತಲೇ ಇತ್ತು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಟಾಲ್ವಿನ್, ಫಾರ್ಮಲ್ ಡಿಹೈಡ್ರೆಡ್, ಎಚ್‌ಸಿಎಲ್ ಮುಂತಾದ ರಾಸಾಯನಿಕ ಪದಾರ್ಥಗಳನ್ನು ಸಂಗ್ರಹಿಸಿಡಲಾಗಿತ್ತು. ಅವುಗಳನ್ನು ಬೇರೆ ಟ್ಯಾಂಕರ್‌ಗೆ ಸ್ಥಳಾಂತರಿಸಲಾಗಿದೆ. ಕ್ಯಾಟಸಿಂತ್ ಫ್ಯಾಕ್ಟರಿಯಲ್ಲಿ ನಾಲ್ಕು ಘಟಕಗಳಿವೆ. ಆ ಪೈಕಿ ಒಂದರಲ್ಲಿ ಮಾತ್ರವೇ ಕೆಲಸ ನಡೆಯುತ್ತಿತ್ತು, ಉಳಿದವುಗಳಲ್ಲಿ ಉತ್ಪಾದನೆ ಆರಂಭಗೊಂಡಿರಲಿಲ್ಲ. ಶನಿವಾರ ಸಂಭವಿಸಿದ ಅಗ್ನಿ ಅನಾಹುತವು ಪರಿಸರದಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಲಾಗಿತ್ತು.