ಕಾರ್ಖಾನೆಗಳ ಮೇಲೆ ಬಿಬಿಎಂಪಿ ದಾಳಿ:220 ಕೆಜಿ ನಿಷೇಧಿತ ಪ್ಲಾಸ್ಟಿಕ್ ಜಪ್ತಿ

ಬೆಂಗಳೂರು, ನ.24- ಸಿಲಿಕಾಮ್ ಸಿಇ ಬೆಂಗಳೂರಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ತಯಾರಿಕ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಬರೋಬ್ಬರಿ 220 ಕೆಜಿ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ.ನಗರದ ಯಶವಂತಪುರ ಮಾರುಕಟ್ಟೆ, ಜಾಲಹಳ್ಳಿ ಜೆ.ಪಿ ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 220 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ಬಳಕೆದಾರರಿಗೆ 5800 ರೂ. ದಂಡ ವಿಧಿಸಿದರು.ಅದರಲ್ಲೂ, ಜಾಲಹಳ್ಳಿಯ ಪೋಲೀಸ್ ಠಾಣೆಯ ಹಿಂಭಾಗದ ಶ್ರೀ ಗಣೇಶ ಎಂಟರ್ ಪ್ರೆಸಸ್ ಎಂಬ ಹೆಸರಿನಲ್ಲಿ ಪ್ಲಾಸ್ಟಿಕ್ ಕೋಟೆಡ್ ಪೇಪರ್ ಪ್ಲೇಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಲು ಹೋದ ಸಮಯದಲ್ಲಿ ಪಾಲಿಕೆಯ ತಂಡ ಬರುತ್ತಿರುವುದನ್ನು ಮನಗಂಡ ಪ್ಲಾಸ್ಟಿಕ್ ಘಟಕವು ಒಳಗಿನಿಂದ ಬೀಗ ಹಾಕಿಕೊಂಡು ಬಾಗಿಲನ್ನು ಮುಚ್ಚಲಾಯಿತು.ನಂತರ ಪಾಲಿಕೆ ಮಾರ್ಷಲ್‌ತಂಡ ಬೀಗ ತಂದು ಹೊರಗಿನಿಂದ ಬೀಗ ಹಾಕಲು ಮುಂದಾದಾಗ ಒಳಗಿನಿಂದ ಬೀಗ ತೆಗೆದು ಪಾಲಿಕೆ ಅಧಿಕಾರಿಗಳ ಜೊತೆಗೆ ಕೆಲಕಾಲ ವಾಗ್ವಾದ ನಡೆಸಿದರು.ಬಳಿಕ ಮಾರ್ಷಲ್‌ಗಳು ಈ ಘಟಕದಲ್ಲಿದ್ದ ಸುಮಾರು 20 ಕೆ.ಜಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು 2000 ರೂ., ದಂಡ ವಿಧಿಸಿದರು.ಆನಂತರ ವಶಪಡಿಸಿಕೊಂಡ ಎಲ್ಲಾ ಪ್ಲಾಸ್ಟಿಕ್ ಉತ್ಪನ್ನಗಳನ್ನು ದೊಡ್ಡಬಿದಿರಕಲ್ಲು ಸಂಸ್ಕರಣ ಘಟಕಕ್ಕೆ ಕಳಿಸಲಾಯಿತು.ಅದೇ ರೀತಿ, ಕೆ.ಆರ್.ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶ, ಹೂವಿನ ಮಾರುಕಟ್ಟೆಯಲ್ಲಿ ಹಾಗೂ ಬೀದಿಬದಿ ವ್ಯಾಪಾರಿಗಳ ಬಳಿ ತಪಾಸಣೆ ನಡೆಸಿದ ವೇಳೆ ಸುಮಾರು 25 ಕೆ.ಜಿ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡು ಮತ್ತೊಮ್ಮೆ ಪ್ಲಾಸ್ಟಿಕ್ ಕವರ್ ಗಳನ್ನು ಬಳಸದಂತೆ ಮಾರ್ಷಲ್‌ಗಳು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ ತಲಾ 200 ರೂ. ದಂಡ ವಿಧಿಸಿದರು.ಒಮ್ಮೆ ಬಳಸುವ ಪ್ಲಾಸ್ಟಿಕ್ ಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮಾರಾಟ ಮಳಿಗೆಗಳು, ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಜೊತೆಗೆ ದಂಡ ವಿಧಿಸಲಾಗುತ್ತಿದೆ ಎಂದು ಪಾಲಿಕೆ ಹೇಳಿದೆ.