ಕಾರು-ಬೈಕ್ ಡಿಕ್ಕಿ: ಸವಾರ ಸಾವು

ಚೇಳೂರು, ಆ. ೨- ಕಾರು ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೋಬಳಿಯ ನಂದಿಹಳ್ಳಿ ಬಳಿ ಇಂದು ಬೆಳಿಗ್ಗೆ ೮ ಗಂಟೆಯಲ್ಲಿ ನಡೆದಿದೆ.
ಚೇಳೂರಿನ ಅಂತಾಪುರ ನಿವಾಸಿ ಶಿವಕುಮಾರ್ ಎಂಬುವರೇ ಮೃತಪಟ್ಟಿರುವ ದುರ್ದೈವಿ.
ಶಿವಕುಮಾರ್ ಬೈಕ್‌ನಲ್ಲಿ ಚೇಳೂರಿನಿಂದ ತುಮಕೂರು ಕಡೆಗೆ ತೆರಳುತ್ತಿದ್ದರು. ಅದೇ ವೇಳೆ ತುಮಕೂರು ಕಡೆಯಿಂದ ಚೇಳೂರಿನತ್ತ ಕಾರು ಬರುತ್ತಿತ್ತು. ಮಾರ್ಗಮಧ್ಯೆ ಚೇಳೂರು ಹೋಬಳಿ ನಂದಿಹಳ್ಳಿ ಬಳಿ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಚೇಳೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.