ಕಾರು -ಬೈಕ್ ಡಿಕ್ಕಿ ತಂದೆ- ಮಗಳು ಸಾವು

ಬೆಂಗಳೂರು, ಏ.೩-ಮಗಳನ್ನು ಶಾಲೆಗೆ ಬಿಡಲು ಬೈಕ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ತಂದೆ- ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಮಾಗಡಿಯ ಸಾಬರಪಾಳ್ಯದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಾಗಡಿಯ ಕಲ್ಯಾ ಗ್ರಾಮದ ಯೋಗೇಶ್ (೪೭) ಮತ್ತವರ ಮಗಳು ಹರ್ಷಿತಾ(೧೪) ಮೃತಪಟ್ಟವರು. ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದಂತೆ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಂದೆ ಶಾಲೆಯತ್ತ ಸಾಬರಪಾಳ್ಯದ ಮಾರ್ಗವಾಗಿ ಹೋಗುತ್ತಿದ್ದಾಗ ಜವರಾಯನಾಗಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳೀಯರು ಬಂದು ಗಾಯಾಳುಗಳನ್ನು ರಕ್ಷಣೆ ಮಾಡಲು ಮುಂದಾದರೂ ಸ್ಥಳದಲ್ಲಿಯೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆಯ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಅಪಘಾತಕ್ಕೆ ಕಾರಣವಾದ ಕಾರನ್ನು ಪೊಲೀಸರು ಜಪ್ತಿಮಾಡಿದ್ದಾರೆ. ಕೃತ್ಯ ನಡೆಸಿ ಪರಾರಿಯಾಗಿರುವ ಕಾರು ಚಾಲಕನ ಬಂಧನಕ್ಕೆ ತೀವ್ರ ಶೋಧ ಕೈಗೊಳ್ಳಲಾಗಿದೆ.