ಕಾರು-ಬಸ್ ಡಿಕ್ಕಿ ೧೧ಮಂದಿ ಸಾವು

ಭೋಪಾಲ್(ಮಧ್ಯಪ್ರದೇಶ),ನ.೪-ವೇಗವಾಗಿ ಹೋಗುತ್ತಿದ್ದ ಕಾರು ಹಾಗೂ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ೧೧ ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಜನರು ಸಾವನ್ನಪ್ಪಿರುವ ಘಟನೆ ಬೇತುಲ್‌ನಲ್ಲಿ ಇಂದು ಮುಂಜಾನೆ ನಡೆದಿದೆ.
ಬೇತುಲ್‌ನ ಗುಡ್ಗಾಂವ್ ಹಾಗೂ ಭೈಸ್ದೇಹಿ ಪ್ರದೇಶದ ನಡುವೆ ನಡೆದ ಈ ಅಪಘಾತದಲ್ಲಿ ಐವರು ಪುರುಷರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಧಾವಿಸಿದ್ದಾರೆ. ಗಾಯಗೊಂಡ ಒಬ್ಬ ಪ್ರಯಾಣಿಕನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಸಾವನ್ನಪ್ಪಿರುವ ೧೧ ಪ್ರಯಾಣಿಕರು ಮಹಾರಾಷ್ಟ್ರದ ಅಮರಾವತಿಯಿಂದ ಹಿಂದಿರುಗುತ್ತಿದ್ದರು. ಘಟನೆ ನಸುಕಿನ ೨ ಗಂಟೆ ವೇಳೆ ನಡೆದಿದೆ. ಕಾರು ಚಾಲಕ ವಾಹನ ಚಲಾಯಿಸುತ್ತಿದ್ದ ವೇಳೆ ನಿದ್ರೆಗೆ ಜಾರಿದ್ದರಿಂದ ಅಪಘಾತ ಉಂಟಾಗಿದೆ.
ಭೀಕರ ಘಟನೆಯ ಬಳಿಕ ೭ ಶವಗಳನ್ನು ತಕ್ಷಣವೇ ಹೊರತೆಗೆಯಲಾಗಿದೆ. ಉಳಿದ ದೇಹಗಳನ್ನು ಹೊರತೆಗೆಯಲು ನಜ್ಜುಗುಜ್ಜಾದ ವಾಹನದ ಭಾಗಗಳನ್ನು ಬೇರ್ಪಡಿಸಬೇಕಾಯಿತು ಎಂದು ಬೇತುಲ್ ಹಿರಿಯ ಪೊಲೀಸ್ ಅಧಿಕಾರಿ ಸಿಮಲಾ ಪ್ರಸಾದ್ ತಿಳಿಸಿದ್ದಾರೆ.