ಕಾರು ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ

ನವದೆಹಲಿ, ಸೆ.೭- ಕಾರಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಇನ್ನು ಮುಂದೆ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಲ್ಲದೆ, ವಾಹನ ತಯಾರಕರು ಹಿಂಬದಿ ಸೀಟುಗಳಿಗೂ ಅನ್ವಯವಾಗುವ ಸೀಟ್ ಬೆಲ್ಟ್ ಅಲಾರಾಂ ವ್ಯವಸ್ಥೆ ಪರಿಚಯಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ, ಎಲ್ಲಾ ವಾಹನ ತಯಾರಕರು ಮುಂಭಾಗದ ಆಸನದ ಪ್ರಯಾಣಿಕರಿಗೆ ಮಾತ್ರ ಸೀಟ್ ಬೆಲ್ಟ್ ಅಲಾರಾಂ ವ್ಯವ್ಯಸ್ಥೆ ಇದೆ. ಈ ಸಂಬಂಧ ಮುಂದಿನ ೩-೪ ದಿನಗಳಲ್ಲಿ ಕರಡು ಅಧಿಸೂಚನೆ ಹೊರಡಿಸುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಐಟಿ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಸೈರಸ್ ಮಿಸ್ತ್ರಿ ,ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಕಾರಣ, ವಾಹನಗಳಲ್ಲಿ ಹಿಂಬದಿಯ ಸೀಟ್‌ಗಳಿಗೂ ಸೀಟ್ ಬೆಲ್ಟ್ ಬೀಪ್ ವ್ಯವಸ್ಥೆ ಇರಬೇಕೆಂದು ನಿರ್ಧರಿಸಿದ್ದೇವೆ ಎಂದರು.
೧೦೦೦ ರೂ ದಂಡ: ಹಿಂದಿನ ಸೀಟುಗಳಲ್ಲಿ ಕುಳಿತುಕೊಳ್ಳುವ ಪ್ರಯಾ
ಣಿಕರು ಸೀಟು ಬೆಲ್ಟ್ ಧರಿಸದಿದ್ದರೆ ಅಂತವರಿಗೆ ೧೦೦೦ ರೂಪಾಯಿ ದಂಢ ವಿಧಿಸಲು ಕೂಡ ನಿರ್ಧರಿಸಲಾಗಿದೆ. ಟ್ರಾಫಿಕ್ ಪೊಲೀಸರು ಸಹ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ವಿರಳವಾಗಿ ದಂಡ ವಿಧಿಸುತ್ತಾರೆ, ಇನ್ನು ಮುಂದೆ ಇದು ಕಡ್ಡಾಯ ಎಂದಿದ್ದಾರೆ.