ಕಾರು ಪಲ್ಟಿ: ಶಿಕ್ಷಕರಿಬ್ಬರ ಸಾವು

ಪಾವಗಡ, ಮೇ ೧೨- ಸಂಬಂಧಿಕರ ಮದುವೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಇಬ್ಬರು ಶಿಕ್ಷಕರು ಕಾರು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಶಿಕ್ಷಕರು ಗಾಯಗೊಂಡಿರುವ ಘಟನೆ ಪಾವಗಡ-ತುಮಕೂರು ಮಾರ್ಗದ ಕಣಿವೇನಹಳ್ಳಿ ಗೇಟ್ ಬಳಿ ತಡರಾತ್ರಿ ನಡೆದಿದೆ.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಓ. ಧನಂಜಯ ಹಾಗೂ ಗೌಡಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕೃಷ್ಣ ಎಂಬುವರೇ ಮೃತಪಟ್ಟಿರುವ ದುರ್ದೈವಿಗಳು. ಇವರೊಂದಿಗೆ ಕಾರಿನಲ್ಲಿದ್ದ ಶಿಕ್ಷಕರಾದ ಆರ್.ಎಂ. ನರಸಿಂಹ ಮತ್ತು ವೆಂಕಟಾಚಲಪತಿ ರವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ತುಮಕೂರಿನಲ್ಲಿ ನಡೆದ ಶಿಕ್ಷಕಿ ಶೋಭಾ ಎಂಬುವರ ಪುತ್ರಿಯ ವಿವಾಹದ ಆರತಕ್ಷತೆಗೆ ಪಾವಗಡದಿಂದ ಕಾರಿನಲ್ಲಿ ಹೋಗಿ ಮದುವೆ ಮುಗಿಸಿಕೊಂಡು ಪಾವಗಡಕ್ಕೆ ಮರಳಿ ಕಾರಿನಲ್ಲಿ ಬರುತ್ತಿದ್ದಾಗ ಮಾರ್ಗಮಧ್ಯೆ ಕಣಿವೇನಹಳ್ಳಿ ಗೇಟ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದ ಸ್ಥಳಕ್ಕೆ ಪಾವಗಡ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.