ಕಾರು ಪಲ್ಟಿ:ತಂದೆ-ಮಗ ಪ್ರಾಣಾಪಾಯದಿಂದ ಪಾರು

ವಿಜಯಪುರ,ಮಾ.24-ರಸ್ತೆಯಲ್ಲಿ ಅಡ್ಡ ಬಂದ ಬೈಕ್ ಸವಾರನ ಜೀವ ಉಳಿಸಲು ಹೋಗಿ ಕಾರ್ ಪಲ್ಟಿಯಾಗಿ ಕಾರಿನಲ್ಲಿದ್ದ ತಂದೆ-ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಗುಲಬುರ್ಗಾ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218ರ ದೇವರಹಿಪ್ಪರಗಿ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಗಲಬುರ್ಗಾ ಮೂಲದ ವಿಜಯಪುರದ ಬಿಎಲ್ ಡಿಇ ಫಾರ್ಮಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರುದ್ರಗೌಡ ಪಾಟೀಲ ಹಾಗೂ ಅವರ ಪುತ್ರ ಸಾಯಿ ಪ್ರಸಾದ ಬೆಳಗ್ಗೆ ಗುಲಬುರ್ಗಾದಿಂದ ವಿಜಯಪುರಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ದೇವರಹಿಪ್ಪರಗಿ ಸಮೀಪದ ಹೆದ್ದಾರಿ ಬಳಿ ಮೊಬೈಲ್ ನಲ್ಲಿ‌ ಮಾತನಾಡುತ್ತಾ ಬೈಕ್ ನಲ್ಲಿ ಹೋಗುತ್ತಿದ್ದ ಯುವಕನ ಪ್ರಾಣ ಉಳಿಸಲು ಹೋಗಿ ಕಾರು ರಸ್ತೆ ಬದಿ ತೆಗ್ಗಿಗೆ ತಗೆದುಕೊಂಡು ಹೋದಾಗ ಕಾರು ಒಂದು ಸುತ್ತು ಪಲ್ಟಿಯಾಗಿ ಬೇವಿನ ಮರದ ಮೇಲೆ ಬಿದ್ದಿದೆ. ಇದರ ಜತೆ ಕಾರಿನ ಏರ ಬ್ಯಾಗ್ ತೆರೆದುಕೊಂಡ ಕಾರಣ ತಂದೆ-ಮಗ ಪ್ರಣಾಪಾಯದಿಂದ ಪಾರಾಗಿದ್ದಾರೆ.
ಕಲಬುರಗಿದ ವಿದ್ಯಾನಗರದಿಂದ ವಿಜಯಪುರದ ಸಂಗನಬಸವ ಹೈಸ್ಕೂಲ್ ವಸತಿ ಶಾಲೆಗೆ ಪುತ್ರ ಸಾಯಿಪ್ರಸಾದನನ್ನು ಬಿಡಲು ಬರುತ್ತಿದ್ದ ತಂದೆ ರುದ್ರಗೌಡ ಪಾಟೀಲ ಮಗನ ಜತೆ ಅಪಘಾತದಿಂದ ಪಾರಾಗಿದ್ದಾರೆ.
ದೇವರಹಿಪ್ಪರಗಿ ಪೊಲೀಸ್ ಠಾಣಾ‌ ವ್ಯಾಪ್ತಿ ಘಟನೆ ನಡೆದಿದೆ.