ಕಾರು ಡಿಕ್ಕಿ : ರಸ್ತೆ ದಾಟುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಸಾವು

ಶಿವಮೊಗ್ಗ, ಜ. 3: ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಓರ್ವರು ಮೃತಪಟ್ಟ ಘಟನೆ ನಗರದ ಹೊರವಲಯ ಗಾಡಿಕೊಪ್ಪ ಸಮೀಪದ ಎನ್.ಹೆಚ್. 206 ರಲ್ಲಿ ನಿನ್ನೆ ರಾತ್ರಿ ನಡೆದಿದೆ.ಜುಲ್ಫಿಕರ್ ಮೃತಪಟ್ಟ ಹೆಡ್ ಕಾನ್ಸ್‌ಟೇಬಲ್ ಎಂದು ಗುರುತಿಸಲಾಗಿದೆ. ಇವರು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೋಟೆಲ್ ವೊಂದರಲ್ಲಿ ಆಯೋಜಿತವಾಗಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯ ಬಂದೋಬಸ್ತ್ ಕಾರ್ಯದಲ್ಲಿ ಭಾಗಿಯಾಗಿದ್ದರು.ಅಪಘಾತ ಸಂಭವಿಸಿದ ಕೂಡಲೇ ಜುಲ್ಫಿಕರ್ ರವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಕಾರು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ