ಕಾರು ಡಿಕ್ಕಿ: ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಸಾವು

ಕಲಬುರಗಿ.ನ.05: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ದ್ವಿಚಕ್ರವಾಹನ ಸವಾರನು ಸ್ಥಳದಲ್ಲಿಯೇ ಅಸುನೀಗಿದ ಘಟನೆ ಜಿಲ್ಲೆಯ ಅಫಜಲಪೂರ್ ಪಟ್ಟಣದ ಹೊರವಲಯದಲ್ಲಿ ಗುರುವಾರ ರಾತ್ರಿ 8-45ರ ಸುಮಾರಿಗೆ ಸಂಭವಿಸಿದೆ. ಮೃತನಿಗೆ ಮಹಾರಾಷ್ಟ್ರ ರಾಜ್ಯದ ಸಿನ್ನೂರ್ ಗ್ರಾಮದ ನಿವಾಸಿ ಆಕಾಶ್ ತಂದೆ ಸಾತಪ್ಪ ಅಳ್ಳಗಿ(25) ಎಂದು ಗುರುತಿಸಲಾಗಿದೆ.
ಆಕಾಶ್ ಮಹಾರಾಷ್ಟ್ರದ ಗಡಿ ಭಾಗದ ನಿವಾಸಿಯಾಗಿದ್ದು, ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಪಟ್ಟಣದ ಗ್ಯಾರೇಜ್‍ನಲ್ಲಿ ದ್ವಿಚಕ್ರವಾಹನದ ದುರಸ್ತಿ ಮಾಡಿಸಿಕೊಂಡು ತನ್ನೂರಿಗೆ ಹೋಗುವಾಗ ಪಟ್ಟಣದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿರುವ ಮಾದಬಾಳ್ ತಾಂಡಾದ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಸುನೀಗಿದ.
ಅಪಘಾತಪಡಿಸಿದ ಕಾರು ಸಿಂದಗಿಯದು ಎಂದು ಗೊತ್ತಾಗಿದೆ. ಕಾರಿನಲ್ಲಿ ದಂಪತಿ ಕೂಸಿನೊಂದಿಗೆ ಸಂಚರಿಸುತ್ತಿದ್ದರು ಎನ್ನಲಾಗಿದ್ದು, ಅವರಿಗಾರಿಗೂ ಗಾಯಗಳು ಆಗಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯೇ ಅಫಜಲಪೂರ್ ಪಿಎಸ್‍ಐ ವಿಶ್ವನಾಥ್ ಮುದರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.