ಕಾರು ಡಿಕ್ಕಿ: ಓರ್ವ ಸಾವು

ಚಿತ್ರದುರ್ಗ.ಡಿ.೨೮- ರಸ್ತೆ ನಿರ್ಮಾಣದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಮಧ್ಯೆದಲ್ಲೇ ಅಡ್ಡದಿಡ್ಡಿಯಾಗಿ ನಿಲ್ಲಿಸಿದ್ದ ಜೆಸಿಬಿ ಗೆ ವ್ಯಾಗನಾರ್ ಕಾರೊಂದು ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿ ನಾಲ್ಕು ಜನ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಗರದ ಎಲ್ ಐ ಸಿ ಕಚೇರಿ ಬಳಿ ನಡೆದಿದೆ.
ಮೃತನನ್ನು ಕೆಂಚಪ್ಪ (೪೦)ಎಂದು ಗುರುತಿಸಲಾಗಿದೆ.
ಚಿತ್ರದುರ್ಗ ನಗರದಲ್ಲಿ ಕಳೆದ ಆರು ತಿಂಗಳಿನಿಂದ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಂದಗತಿಯಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡುತ್ತಿದ್ದಾರೆ. ಅಲ್ಲದೆ ತಮಗೆ ಮನ ಬಂದಂತೆ ರಸ್ತೆಗಳನ್ನು ಕಿಳುತ್ತಿದ್ದು, ಇದಕ್ಕಾಗಿ ಜೆಸಿಬಿ ಯಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆ ವರೆಗೂ ಕಾರ್ಯ ನಿರ್ವಹಿಸುವ ಜೆಸಿಬಿ ಯಂತ್ರಗಳನ್ನು ಕೆಲಸ ಮುಗಿದ ನಂತರ ರಸ್ತೆ ಮಧ್ಯೆದಲ್ಲೇ ಎಲ್ಲೆಂದರಲ್ಲಿ
ಅಡ್ಡದಿಡ್ಡಿಯಾಗಿ ನಿಲ್ಲಿಸಿ ಹೋಗುತ್ತಾರೆ. ಇದರ ಪರಿಣಾಮ ಇಂದು ಮುಂಜಾನೆ ಒಬ್ಬ ವ್ಯಕ್ತಿಯ ಜೀವವನ್ನು ಬಲಿ ತೆಗೆದುಕೊಂಡಿದೆ.
ಚಳ್ಳಕೆರೆ ತಾಲೂಕಿನ ಚಿಕ್ಕ ಮಧುರೆ ಗ್ರಾಮದ ಕೆಂಚಪ್ಪ ನಗರದ ಹೊಳಲ್ಕೆರೆ ರಸ್ತೆಯ ಕಣಿವೆ ಸಮೀಪ ತಿರುಮಲ ಡಾಬಾ ನಡೆಸುತ್ತಿದ್ದು, ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಹೋಗಿ ಚುನಾವಣೆ ಮುಗಿಸಿಕೊಂಡು ಇಂದು ಮುಂಜಾನೆ ಚಿತ್ರದುರ್ಗಕ್ಕೆ ವಾಪಾಸ್ಸು ಬರುವ ವೇಳೆ ನಗರದ ಎಲ್ ಐ ಸಿ ಕಚೇರಿ ಮುಂಭಾಗದ ಬಿ ಡಿ ರಸ್ತೆ ನಿರ್ಮಾಣಕ್ಕೆ ಜೆಸಿಬಿ ಯಂತ್ರವನ್ನು ಬಳಸಿ ರಾತ್ರಿ ರಸ್ತೆ ಮಧ್ಯದಲ್ಲೇ ನಿಲ್ಲಿಸಿ ಹೋಗಿದ್ದರಿಂದ ಮುಂಜಾನೆಯ ಮಂಜು ಆವರಿಸಿ ಜೆಸಿಬಿ ಯಂತ್ರ ಕಾಣಿಸದೆ ನೇರವಾಗಿ ವ್ಯಾಗೇನರ್ ವಾಹನ ಜೆಸಿಬಿ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಕೆಂಚಪ್ಪ ಸ್ಥಳದಲ್ಲೇ ಸಾವನ್ನಪ್ಪಿದು, ನಾಲ್ವರು ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಸುರಕ್ಷತಾ ಕ್ರಮವನ್ನು ವಹಿಸದೆ ರಸ್ತೆ ನಿರ್ಮಾಣ ಮಾಡುತ್ತಿರುವ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕ್ರಮವನ್ನು ಸಾರ್ವಜನಿಕರು ಖಂಡಿಸಿದ್ದು, ಜಿಲ್ಲಾಡಳಿತ ಕೂಡಲೇ ಇವರುಗಳ ಮೇಲೆ ಕ್ರಮ ಕೈಗೊಂಡು ಮುಂದೆ ಇಂತಹ ಅನಾಹುತಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.