ಕಾರು-ಟ್ರಕ್ ಡಿಕ್ಕಿ ೧೧ ಮಂದಿ ಸಾವು

ಬಲೋದ್ (ಛತ್ತೀಸ್‌ಗಢ),ಮೇ.೪-ವೇಗವಾಗಿ ಹೋಗುತ್ತಿದ್ದ ಬೊಲೆರೊ ಕಾರು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ೧೧ ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಧಮ್ತಾರಿ ಜಿಲ್ಲೆಯ ಜಾಗತ್ರ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮೃತರಲ್ಲಿ ಐವರು ಮಹಿಳೆಯರು ಹಾಗು ಇಬ್ಬರು ಮಕ್ಕಳು ಸೇರಿದ್ದು ಉಳಿದವರು ಪುರುಷರಾಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಧಮ್ತಾರಿ ಜಿಲ್ಲೆಯ ರುದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊರೆಮ್ ಗ್ರಾಮದ ಸಾಹು ಕುಟುಂಬ ಕಂಕೇರ್‌ನಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮಕ್ಕೆ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದರು.
ಮಾರ್ಗ ಮಧ್ಯದ ಬಲೋದ್‌ನ ಜಾಗತ್ರ ಎಂಬಲ್ಲಿ ಸಂಚರಿಸುತ್ತಿದ್ದಾಗ ಎದುರಾದ ಟ್ರಕ್, ಬೊಲೆರೊಗೆ ಡಿಕ್ಕಿ ಹೊಡೆಯಿತು. ರಭಸಕ್ಕೆ ಬೊಲೆರೊ ಕೆಲವು ಮೀಟರ್‌ಗಳಷ್ಟು ದೂರ ಹಾರಿ ಬಿದ್ದಿದೆ.
ಬೊಲೆರೊ ವಾಹನದಲ್ಲಿ ಪ್ರಯಾಣಿಸುತ್ತಿದ್ದ ೧೧ ಜನರ ಪೈಕಿ ೧೦ ಮಂದಿ ಸ್ಥಳದಲ್ಲೇ ಮೃತಪಟ್ಟರು. ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.
ಮೃತರೆಲ್ಲರೂ ಧಮ್ತಾರಿ ಜಿಲ್ಲೆಯ ಸೋರಂ ಭಟಗಾಂವ್ ನಿವಾಸಿಗಳು ಎಂದು ಹೇಳಲಾಗುತ್ತಿದೆ.ಅಪಘಾತದ ನಂತರ ಸ್ಥಳೀಯರು ಮತ್ತು ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದರು.
ಸುದ್ದಿ ತಿಳಿದ ತಕ್ಷಣ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿತ್ತು. ಪರಿಶೀಲನೆ ಕೈಗೊಂಡ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜಧಾನಿ ರಾಯಪುರಕ್ಕೆ ರವಾನಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ.
ಸಿಎಂ ಸಂತಾಪ:
ಘಟನೆಯ ಮಾಹಿತಿ ತಿಳಿದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ದುಃಖ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಗಾಯಾಳು ಬಾಲಕಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ತಡರಾತ್ರಿ ಟ್ವೀಟ್ ಮಾಡಿರುವ ಅವರು ಬಲೋದ್‌ನ ಪುರೂರ್ ಮತ್ತು ಚಾರ್ಮಾ ನಡುವಿನ ಬಲೋದ್‌ಗಹನ್ ಬಳಿ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ಬೊಲೆರೊ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ.
ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬಕ್ಕೆ ಧೈರ್ಯ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಟ್ರಕ್ ಚಾಲಕ ಪರಾರಿ:
ಇನ್ನು, ಅಪಘಾತ ಸಂಭವಿಸಿದ ಬಳಿಕ ಟ್ರಕ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಶೀಘ್ರವೇ ಆತನನ್ನು ಸೆರೆ ಹಿಡಿಯಲಾಗುವುದು ಎಂದು ಬಲೋದ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ. ಬಲೋದ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.