
ಬೆಂಗಳೂರು,ನ.೬- ನಗರದಲ್ಲಿ ಸಂಚಲನ ಮೂಡಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯಾಗಿದ್ದ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೊಲೆ ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಗರ ಪೊಲೀಸರು ಬಲೆಗೆ ಕೆಡವಿದ್ದಾರೆ.
ಕೆಲಸದಿಂದ ತೆಗೆದ ದ್ವೇಷದ ಹಿನ್ನೆಲೆಯಲ್ಲಿ ಭೂ ವಿಜ್ಞಾನಿ ಪ್ರತಿಮಾ(೪೫) ಅವರನ್ನು ಅವರ ಹಳೆ ಕಾರು ಚಾಲಕ ಕಿರಣ್ ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಕೊಲೆ ಕೃತ್ಯ ನಡೆಸಿ ಚಾಮರಾಜನಗರದತ್ತ ಪರಾರಿಯಾಗಿದ್ದ ಆರೋಪಿ ಕಿರಣ್‌ನನ್ನು ಕ್ಷಿಪ್ರ ಕಾರ್ಯಚರಣೆ ನಡೆಸಿ ಮೊಬೈಲ್ ಲೋಕೇಶನ್ ಸಿಗ್ನಲ್ ಆಧರಿಸಿ ಮಹದೇಶ್ವರಬೆಟ್ಟದಲ್ಲಿ ಸೆರೆ ಹಿಡಿದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡು ಅನುಮಾನದ ಮೇಲೆ ನಿನ್ನೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಕಿರಣ್ ಕೃತ್ಯ ನಡೆಸಿರುವುದು ಪತ್ತೆಯಾಗಿದೆ.ಕೆಲ ದಿನಗಳ ಹಿಂದೆ ಆರೋಪಿ ಕಾರು ಚಾಲಕ ಕಿರಣ್ ಅಪಘಾತ ನಡೆಸಿದ್ದು,ಅಲ್ಲದೇ ಅಕ್ರಮ ಗಣಿಗಾರಿಕೆ ಸಂಬಂಧ ದಾಳಿಗೆ ಹೋಗುವ ಸ್ಥಳದ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ.ಇದರಿಂದಾಗಿ ಪ್ರತಿಮಾ ಅವರು ಆತನನ್ನು ೧೦ ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದು,ಕೆಲಸವಿಲ್ಲದೇ ಕಂಗಾಲಾದ ಆತ ಪ್ರತಿಮಾ ಅವರ ಬಳಿ ಮನವಿ ಮಾಡಿ ಕೆಲಸ ಕೇಳಲು ಮುಂದಾಗಿದ್ದ.ಅದರಂತೆ ಕಳೆದ ನ.೪ ರ ರಾತ್ರಿ ೮ರ ವೇಳೆ ಹೊಸದಾಗಿ ನೇಮಿಸಿಕೊಂಡ ಕಾರು ಚಾಲಕ ಕೆಲಸ ಮುಗಿಸಿದ ಪ್ರತಿಮಾ ಅವರನ್ನು ದೊಡ್ಡಕಲ್ಲಸಂದ್ರದ ಕುವೆಂಪುನಗರದ ಮನೆ ಬಳಿ ಬಿಟ್ಟು ಹೋದ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಬಂದ ಕಿರಣ್ ನನ್ನನ್ನು ಕೆಲಸದಿಂದ ತೆಗೆಯಬೇಡಿ ಎಂದು ಪ್ರತಿಮಾರ ಕಾಲಿಗೆ ಬಿದ್ದು ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ.ಆದರೂ ಸಹ ಪ್ರತಿಮಾ ಒಪ್ಪಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಕಿರಣ್, ವೈರ್ ಮಾದರಿಯ ವಸ್ತುದಿಂದ ಪ್ರತಿಮಾ ಕುತ್ತಿಗೆಗೆ ಬಿಗಿದಿದ್ದಾನೆ.ಉಸಿರುಗಟ್ಟಿ ನೆಲಕ್ಕೆ ಬಿದ್ದ ಪ್ರತಿಮಾ ಅವರನ್ನು ಬೆಡ್ ರೂಮ್ ಗೆ ಎಳೆದೊಯ್ದು ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಚಾಮರಾಜನಗರದತ್ತ ಪರಾರಿಯಾಗಿದ್ದು ಪ್ರಕರಣ ದಾಖಲಿಸಿದ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಫೋನ್ ಸಿಗ್ನಲ್ ಆಧರಿಸಿ ಕೊನೆಗೆ ಮಹದೇಶ್ವರಬೆಟ್ಟದಲ್ಲಿ ಕಿರಣ್ ನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರತಿಮಾ ಕೊಲೆ ಪ್ರಕರಣ ತನಿಖೆಯು ದಕ್ಷಿಣ ವಿಭಾಗದ ಡಿಸಿಪಿ ನೇತೃತ್ವದಲ್ಲಿ ನಡೆಯುತ್ತಿದ್ದು ಆರೋಪಿ ಕಿರಣ್. ಮಹದೇಶ್ವರ ಬೆಟ್ಟದಲ್ಲಿ ಕಿರಣ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದರು.ಕಿರಣ್ ನಾಲ್ಕು ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ೧೦ ದಿನದ ಹಿಂದೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.ಪ್ರತಿಮಾ ಕೊಲೆಗೆ ಕೌಟುಂಬಿಕ ಕಾರಣವೆಂದು, ಅಕ್ರಮ ಕಲ್ಲು ಗಣಿಗಾರಿಕೆ ತಡೆದಿದ್ದು ಕಾರಣವೆಂದು, ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು ಕಾರಣವೆನ್ನುವ ಅನುಮಾನಗಳು ವ್ಯಕ್ತವಾಗಿದ್ದವು, ಇದರಿಂದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆದಿತ್ತು. ಇದೀಗ ಚಾಲಕನೇ ಕೊಲೆಗೆ ಕಾರಣ ಎಂದು ಸ್ಪಷ್ಟವಾಗಿದೆ.ಪ್ರತಿಮಾ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಯೆಂಬ ಹೆಸರು ಪಡೆದಿದ್ದರು. ದೊಡ್ಡಕಲ್ಲಸಂದ್ರದ ಕುವೆಂಪುನಗರದ ಎರಡು ಅಂತಸ್ತಿನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರತಿಮಾ ಅವರನ್ನು ನ.೪ ರಾತ್ರಿ ೮.೩೦ರ ಸುಮಾರಿಗೆ ಕೊಲೆ ಮಾಡಲಾಗಿತ್ತು.ಪ್ರತಿಮಾಳಿಗೆ ಅಂದು ರಾತ್ರಿ ಅವರ ಸಹೋದರ ಕರೆ ಮಾಡಿದ್ದು, ಸ್ವೀಕರಿಸದೆ ಇದ್ದಾಗ ಅನುಮಾನಗೊಂಡು ನಿನ್ನೆ ಬೆಳಗ್ಗೆ ಮನೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು,ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿರಲಿಲ್ಲ. ಕಳೆದ ಎಂಟು ವರ್ಷಗಳಿಂದ ದೊಡ್ಡಕಲ್ಲಸಂದ್ರದಲ್ಲಿ ಪ್ರತಿಮಾ ವಾಸವಾಗಿದ್ದ ಪ್ರತಿಮಾ ಅವರ ಪತಿ ಸತ್ಯನಾರಾಯಣ, ಮಗ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದರು.ಪ್ರತಿಮಾ ಹತ್ಯೆ ವಿಚಾರಣೆಗಾಗಿ ಪೊಲೀಸರು ಆರು ತಂಡ ರಚಿಸಿದ್ದರು. ಇದರಲ್ಲಿ ಭೂಮಾಫಿಯಾ, ಅಕ್ರಮ ಗಣಿಗಾರಿಕೆ ಮಾಫಿಯಾ ಕೈವಾಡ ಇತ್ಯಾದಿ ಶಂಕೆಗಳು ತಲೆದೋರಿದ್ದವು. ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಭೂ ಸರ್ವೆ ಮಾಡಿದ್ದ ಪ್ರತಿಮಾ, ೪ ಎಕರೆ ೫ ಗುಂಟೆ ಜಮೀನಿನಲ್ಲಿ ಅಕ್ರಮ ಗಣಿಗಾರಿಗೆ ಮಾಡಿ ೨೫ ಲಕ್ಷ ನಷ್ಟ ಉಂಟುಮಾಡಿದ್ದನ್ನು ಪತ್ತೆ ಮಾಡಿ ವರದಿ ನೀಡಿದ್ದರು.ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಶಾಸಕರೊಬ್ಬರು ಸೇರಿದಂತೆ ನಾಲ್ಕು ಜನರ ವಿರುದ್ಧ ಎಫ್.ಐ.ಆರ್ ಕೂಡ ದಾಖಲಾಗಿತ್ತು. ಇತ್ತೀಚೆಗೆ ಹಲವು ಅಕ್ರಮ ಗಣಿಗಾರಿಕೆ ಸಂಬಂಧಿಸಿ ಪ್ರತಿಮಾ ದಾಳಿಗಳನ್ನು ನಡೆಸಿದ್ದರು. ಈ ಕೋನದಲ್ಲೂ ತನಿಖೆ ನಡೆದಿತ್ತು