ಕಾರು ಗೂಡ್ಸ್ ಟೆಂಪೋ ನಡುವೆ ಭೀಕರ ಅಪಘಾತ; ತಾಯಿ, ಮಗ ಸಾವು

ಮದ್ದೂರು. : ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊಡಗು ಮೂಲದ ತಾಯಿ ಮತ್ತು ಮಗ ಮೃತ ಪಟ್ಟು ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರವಲಯದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಕೊಡಗು ಜಿಲ್ಲೆಯ ನಾಪೋಕ್ಲು ಬಳಿಯ ಬಲಮುರಿ ನಿವಾಸಿಗಳಾದ ಕವಿತಾ (47), ಆಕೆಯ ಪುತ್ರ ಆರ್ಯ ಅಯ್ಯಪ್ಪನ್ (14) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಗಿದ್ದಾರೆ.


ಅಪಘಾತದಲ್ಲಿ ಆರ್ಯ ಅಯ್ಯಪ್ಪನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನ ತಾಯಿ ಕವಿತಾ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಈಕೆಯ ಪತಿ ಮುತ್ತಪ್ಪ (53) ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಮತ್ತು ಗಾಯಾಳು ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರು. ಯುಗಾದಿ ಹಬ್ಬಕ್ಕಾಗಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದರು. ನಂತರ ಬೆಂಗಳೂರಿಗೆ ತೆರಳುವ ವೇಳೆ ಪಟ್ಟಣದ ಹೊರ ವಲಯದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಐಶ್ವರ್ಯ ಕಾನ್ವೆಂಟ್ ಬಳಿ ಮಧ್ಯಾಹ್ನ 2.20 ರ ಸುಮಾರಿಗೆ ಮುಂದೆ ಸಾಗುತ್ತಿದ್ದ ಗೂಡ್ಸ್ ಟೆಂಪೋ ಚಾಲಕ ಅಠಾತ್ ಬ್ರೇಕ್ ಹಾಕಿದಾಗ ಮುತ್ತಪ್ಪ ಚಾಲನೆ ಮಾಡುತ್ತಿದ್ದ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣಾ ಪಿಎಸ್ಐ ಅಯ್ಯನಗೌಡ ಮತ್ತು ಸಿಬ್ಬಂದಿಗಳು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.