ಕಾರು ಕೆರೆಗೆ ಉರುಳಿ ನಾಲ್ವರು ವಿದ್ಯಾರ್ಥಿಗಳು ಸಾವು

ಬೆಂಗಳೂರು,ಡಿ.೧೦-ವೇಗವಾಗಿ ಹೋಗುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದು ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ೪೪ರ ಚಿಕ್ಕಬಳ್ಳಾಪುರ ಬೈಪಾಸ್‌ಬಳಿಯಲ್ಲಿ ನಡೆದಿದೆ.ನಗರದ ರೇವಾ ಕಾಲೇಜಿನ ವಿದ್ಯಾರ್ಥಿಗಳಾದ ಚಿಂತಾಮಣಿಯ ನೆಕ್ಕೂಂದಿಪೇಟೆಯ ಟ್ಯಾಗೂರು(೨೧), ಚಿಕ್ಕಬಳ್ಳಾಪುರದ ಭಾರತಿ ಬಡಾವಣೆಯ ಪವನ್(೨೨), ಆರ್ಯನ್(೨೨), ಚಿಕ್ಕಬಳ್ಳಾಪುರದ ಹೆಚ್.ಎಸ್.ಗಾರ್ಡನ್ ನ ವಸಂತ್(೨೧) ಮೃತ ದುರ್ದೈವಿಗಳು.ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ೪೪ರ ಮೂಲಕ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕೆ.ಎ ೦೩-ಎಂ.ಟಿ ೦೭೬೧ ರೆಡ್ ಕಲರ್ ವಾಕ್ಸವೋಗನ್ ಕಾರಿನಲ್ಲಿ ಹೊರಟಿದ್ದ ನಾಲ್ಕು ಜನ ವಿದ್ಯಾರ್ಥಿಗಳು, ಇನ್ನೇನು ಒಂದು ನಿಮಿಷ ಆಗಿದ್ದರೆ ಮನೆ ಸೇರಿಕೊಳ್ಳುತ್ತಿದ್ದರು.ಆದರೆ ಅದೇನ್ ಆಯಿತೋ ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಬೈಪಾಸ್ ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರು, ಅಮಾನಿ ಗೋಪಾಲಕೃಷ್ಣ ಕೆರೆಗೆ ಉರುಳಿಬಿದ್ದಿದೆ.ಕಾರು ನೀರಿನಲ್ಲಿ ಮುಳುಗಿದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿ ಹೆಣವಾಗಿದ್ದಾರೆ. ಇನ್ನೂ ಹೆದ್ದಾರಿಯಲ್ಲಿ ಕಾರಿನ ಹಿಂದೆ ಸಂಚರಿಸುತ್ತಿದ್ದ ಆಂಬುಲೆನ್ಸ್ ಚಾಲಕನೋರ್ವ ಕಾರು ಉರುಳಿಬಿದ್ದಿನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇನ್ನೂ ತಕ್ಷಣ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ನಗರದ ಎಚ್.ಎಸ್ ಗಾರ್ಡನ್ ಬಡಾವಣೆಯ ನಿವಾಸಿಗಳು ಸಂಚಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟು, ಕಾರಿನಲ್ಲಿದ್ದವರನ್ನು ಹೊರಗೆ ತೆಗೆದರು. ಆದರೆ ಅಷ್ಟೊತ್ತಿಗೆ ನಾಲ್ಕು ಜನ ಕಾರಿನಲ್ಲಿ ಮೃತಪಟ್ಟಿದ್ದರು. ಕೊನೆಗೆ ಕ್ರೇನ್ ಮೂಲಕ ಕಾರನ್ನು ಮೇಲೆ ಎತ್ತಲಾಯಿತು.. ಪವನ್ ಅಜ್ಜಿ ಮನೆ ಚಿಕ್ಕಬಳ್ಳಾಪುರವಾಗಿದ್ದು ಅಜ್ಜಿ ಮನೆಗೆ ಬರುವಾಗ ಘಟನೆ ನಡೆದಿದೆ.ಇನ್ನೂ ಕಾರು ಪವನ್ ಗೆ ಸೇರಿದ್ದು, ಅದರ ಮಾಲಿಕತ್ವ ಬೆಂಗಳೂರಿನ ಕಾರ್ತಿಕ್ ಎನ್ನುವವರ ಹೆಸರಿನಲ್ಲಿದೆ, ಇತ್ತಿಚಿಗೆ ಕಾರು ವೀಮೆ ಅವಧಿ ಮುಗಿದಿದೆ, ನಾಲ್ಕು ಜನ ವಿದ್ಯಾರ್ಥಿಗಳು ಅತಿವೇಗವಾಗಿ ಕಾರು ಚಲಾಯಿಸಲು ಹೋಗಿ ಕೆರೆಗೆ ಉರುಳಿಬಿದ್ದಿರುವ ಸಾಧ್ಯತೆಯಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯ ಕೈಗೊಂಡಿದ್ದು ಮೃತರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ