ಕಲಬುರಗಿ, ಏ.15-ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಕಾರು ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ 12:30 ರ ಸುಮಾರಿಗೆ ಕಲಬುರ್ಗಿಯ ಆಕಾಶವಾಣಿ ಕೇಂದ್ರದ ಬಳಿ ಘಟನೆ ನಡೆದಿದ್ದು, ಅಪಘಾತದಲ್ಲಿ ಚಿಂಚನಸೂರ್ ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. ಸ್ಥಳಿಯರು ಬಾಬುರಾವ್ ಚಿಂಚನಸೂರ್ ಅವರನ್ನು ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿನ್ನೆ ಚುನಾವಣಾ ಪ್ರಚಾರ ಮುಗಿಸಿ ಯಾದಗಿರಿಯಿಂದ ಕಲಬುರಗಿಯತ್ತ ಪ್ರಯಾಣಿಸುತ್ತಿದ್ದ ವೇಳೆ ನಿದ್ದೆಯ ಮಂಪರಿನಲ್ಲಿದ್ದ ವಾಹನ ಚಾಲಕನಿಗೆ ರಸ್ತೆಯ ಮಧ್ಯೆ ಇರುವ ಗುಂಡಿ ಕಾಣದೆ ಕಾರು ಗುಂಡಿಯಲ್ಲಿ ಸಿಲುಕಿ ಸ್ಕಿಡ್ ಆಗಿದೆ. ಇದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಚಿಂಚನಸೂರು ಆಪ್ತರೊಬ್ಬರು, ಕಾರಿನಲ್ಲಿ ಬಾಬುರಾವ್ ಚಿಂಚನಸೂರು, ಇಬ್ಬರು ಚಾಲಕರು, ಓರ್ವ ಗನ್ ಮ್ಯಾನ್ ಇದ್ದರು ಎಂದು ತಿಳಿದು ಬಂದಿದ್ದು, ಇವರಿಗೆ ಯಾವುದೇ ಗಾಯಗಳಾಗಿಲ್ಲ.
ಘಟನೆ ಬಳಿಕ ಸ್ಥಳೀಯರ ಸಹಾಯದಿಂದ ಬಾಬುರಾವ್ ಚಿಂಚನಸೂರ್ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿರುವ ಬಾಬುರಾವ್ ಚಿಂಚನಸೂರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕರು ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ, ಬಾಬುರಾವ್ ಚಿಂಚನಸೂರ್ ವಿಧಾನ ಪರಿಷತ್ ಸದಸ್ಯರಾಗಿ ಒಂದೂವರೆ ವರ್ಷಗಳ ಕಾಲ ಅಧಿಕಾರ ಬಾಕಿ ಇದ್ದರು, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ.