ಕಾರಿನ ಚಕ್ರ ತೆಗೆದು ತನ್ನ ಕಾರಿಗೆ ಜೋಡಿಸಿ ಪರಾರಿಯಾದ ಐನಾತಿ ಕಳ್ಳ

ಬೆಂಗಳೂರು,ನ.19-ಮನೆಯ ಬಳಿ ನಿಲ್ಲಿಸಿದ್ದ ಕಾರಿನ ಚಕ್ರವನ್ನು ತನ್ನ ಕಾರಿಗೆ ಜೋಡಿಸಿ ಕಳ್ಳನೊಬ್ಬ ಪರಾರಿಯಾದ ಘಟನೆ ಯಲಹಂಕದಲ್ಲಿ ನಡೆದಿದೆ.
ಕಳೆದ ಅ. 25 ರಂದು ಮಾಲೀಕ ದೀಪಕ್ ಕಾರನ್ನು ನೋಡಿದಾಗ ಚಕ್ರದ ಬೋಲ್ಟ್ ನಟ್ ಫಿಟ್ ಮಾಡಿರಲಿಲ್ಲ. ಅನುಮಾನ ಬಂದು ಪರೀಕ್ಷಿಸಿದಾಗ ಟಯರ್ ತೆಗೆದಿರುವುದು ಗೊತ್ತಾಗಿದೆ.
ಬಳಿಕ ಸಿಸಿಟಿವಿಯನ್ನು ಪರೀಕ್ಷಿಸಿದಾಗ ವ್ಯಕ್ತಿಯೊಬ್ಬ ಕಾರಿನ ಚಕ್ರವನ್ನು ತೆಗೆದು ಪರಾರಿಯಾಗಿರುವುದು ದೃಢಪಟ್ಟಿದೆ.
ಸಿಸಿಟಿವಿಯಲ್ಲಿ ಏನಿದೆ?
ಅ.24ರ ರಾತ್ರಿ 9 ಗಂಟೆಗೆ ನಿಲ್ಲಿಸಿದ್ದ ಕಾರಿನ ಬಳಿ ವ್ಯಕ್ತಿಯೊಬ್ಬ ಬಂದಿದ್ದಾನೆ. ಅಲ್ಲೇ ಸಮೀಪ ಸುತ್ತಾಡಿದ್ದ ಆತ ರಾತ್ರಿ 11 ಗಂಟೆಯ ವೇಳೆಗೆ ತನ್ನ ಕಾರಿನ ಚಕ್ರವನ್ನು ತೆಗೆದು ಪಾರ್ಕ್ ಆಗಿದ್ದ ಕಾರಿನ ಮುಂದುಗಡೆ ಚಕ್ರವನ್ನು ತೆಗೆದಿದ್ದಾನೆ.
ಎಡಭಾಗದಲ್ಲಿದ್ದ ಚಕ್ರವನ್ನು ತೆಗೆದು ತನ್ನ ಕಾರಿನ ಚಕ್ರವನ್ನು ಇಟ್ಟಿದ್ದಾನೆ. ಬಳಿಕ ತನ್ನ ಕಾರಿಗೆ ಕದ್ದ ಚಕ್ರವನ್ನು ಜೋಡಿಸಿ ಪರಾರಿಯಾಗಿದ್ದಾನೆ.
ಸಿಸಿಟಿವಿ ದೃಶ್ಯವನ್ನು ಆಧರಿಸಿ ಕಾರು ಮಾಲೀಕ ದೀಪಕ್ ಅವರು ಯಲಹಂಕ ಉಪನಗರ ಠಾಣೆಯಲ್ಲಿ ದೂರು ನೀಡಿದ್ದು ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.