ಕಾರಿನಲ್ಲಿ ಮುದ್ದಾದ ಅವಳಿ ಮಕ್ಕಳ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

ಹಾವೇರಿ,ಜೂ.1-ತಂದೆಯೇ ತನ್ನ ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದ ಅವರ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ನಡೆದಿದೆ.
ಮೃತಪಟ್ಟ ಮಕ್ಕಳನ್ನು ಅದ್ವೈತ್ (4), ಅನ್ವೀತ್ (4)ನನ್ನು ತಂದೆ ಅಮರ್ ಕಿತ್ತೂರು ಪತ್ನಿ ವಿಜಯಪುರದಲ್ಲಿರುವ ತವರಿಗೆ ಹೋಗಿದ್ದ ಸಂದರ್ಭದಲ್ಲಿ ಮಕ್ಕಳನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ಮೂಲದ ಅಮರ್ ಸದ್ಯ ದಾವಣಗೆರೆಯ ಆಂಜನೇಯ ಮಿಲ್ ಬಡಾವಣೆಯಲ್ಲಿ ವಾಸವಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಬಳಿ ಇರುವ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿದ್ದಾರೆ. ಕೃತ್ಯ ಎಸಗಲು ಮಕ್ಕಳನ್ನು ಕೊರೆದೊಯ್ಯುವಾಗ ಅವರ ತಾಯಿ ಮನೆಯಲ್ಲೇ ಇದ್ದರು.
ಅಮರ್ ತನ್ನ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾಗ ಪತ್ನಿ ದೂರವಾಣಿ ಕರೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಅಮರ್, ಮಕ್ಕಳ ಕಥೆ ಮುಗಿದಿದೆ ಎಂದಿದ್ದರು. ಇದರಿಂದ ಗಾಬರಿಗೊಂಡ ಪತ್ನಿ ತಕ್ಷಣವೇ ದಾವಣಗೆರೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ ಆತಂಕ ವ್ಯಕ್ತಪಡಿಸಿದ್ದರು.
ಅಷ್ಟರಲ್ಲಾಗಲೇ ಅಮರ್ ತನ್ನ ಮೊಬೈಲ್ ಫೋನ್​ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಸಿಮ್ ಕಾರ್ಡ್ ಟ್ರೇಸ್ ಮಾಡಿದ ಪೊಲೀಸರಿಗೆ ಅಮರ್ ಚಳಗೇರಿ ಟೋಲ್ ಬಳಿ ಇದ್ದ ಮಾಹಿತಿ ಲಭ್ಯವಾಗಿದೆ. ಅಲ್ಲಿಗೆ ತೆರಳಿದಾಗ ಆರೋಪಿಯು ದಾವಣಗೆರೆಗೆ ವಾಪಸಾಗಿರುವುದು ತಿಳಿಯುತ್ತದೆ. ನಂತರ ದಾವಣಗೆರೆಗೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆ ಮಾಡಿದ ನಂತರ ಮಕ್ಕಳ ಶವಗಳನ್ನು ಅಮರ್ ಕಾರಿನಲ್ಲಿಯೇ ತಂದಿದ್ದರು. ಪೊಲೀಸರ ತನಿಖೆ ವೇಳೆ, ತಾನೇ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ಸಂಬಂಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಕ್ಕಳನ್ನು ಹತ್ಯೆಗೈದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಹೆಚ್ಚಿನ ವಿವರ ತನಿಖೆಯ ನಂತರ ತಿಳಿಯಬೇಕಿದೆ.