ಕಾರಿನಲ್ಲಿ ಒಬ್ಬರಿದ್ದರೂ ‘ಮಾಸ್ಕ್’ ಕಡ್ಡಾಯ


ನವದೆಹಲಿ, ಏ. ೦೭: ಕಾರಿನಲ್ಲಿ ಒಬ್ಬರಿದ್ದರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯ ಎಂದೇಳಿರುವ ದೆಹಲಿ ಹೈಕೋರ್ಟ್ ಕಾರು ” ಸಾರ್ವಜನಿಕ ಸುರಕ್ಷಿತ ಸ್ಥಳ ವಾಗಿದ್ದು, ಮಾಸ್ಕ್ ಸುರಕ್ಷಿತಾ ರಕ್ಷಾ ಕವಚ ”ಎಂದು ಹೇಳಿದೆ.
ಮಾಸ್ಕ್ ಧರಿಸದೆ ಕಾರು ಓಡಿಸುತ್ತಿದ್ದ ಕಾರಣ ದಂಡ ವಿಧಿಸುವ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್, ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಪ್ರಕಟಿಸಿದ್ದಾರೆ.
“ನೀವು ಕಾರಿನಲ್ಲಿ ಒಬ್ಬಂಟಿಯಾಗಿದ್ದರೂ, ಮುಖವಾಡ ಧರಿಸಲು ಏಕೆ ಆಕ್ಷೇಪ? ಇದು ನಿಮ್ಮ ಸ್ವಂತ ಸುರಕ್ಷತೆಗಾಗಿ” ಎಂದು ನ್ಯಾಯಾಧೀಶರು ಹೇಳಿದರು. ” ಕೋವಿಡ್ ಬಿಕ್ಕಟ್ಟು ಎಲ್ಲೆಡೆ ಹೆಚ್ಚಾಗಿದೆ. ಒಬ್ಬ ವ್ಯಕ್ತಿಗೆ ಲಸಿಕೆ ಹಾಕಲಿ ಬಿಡಲಿ, ಅವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.” ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸುವುದು ಕೋವಿಡ್ ವಿರುದ್ಧ ಸುರಕ್ಷಿತವಾಗಿರಲು ಯಾರಾದರೂ ಮಾಡಬಹುದಾದ ಕನಿಷ್ಠ ಕೆಲಸವಿದು. ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ನಿಂತಾಗ, ಚಾಲಕ ಆಗಾಗ್ಗೆ ತಮ್ಮ ಕಿಟಕಿಯಿಂದ ಕೆಳಗೆ ಉಗುಳಬೇಕಾಗುತ್ತದೆ, ಆ ಸಂದರ್ಭದಲ್ಲಿ ಯಾರಿಗಾದರೂ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಈ ಆದೇಶವು ವಕೀಲ ಸೌರಭ್ ಶರ್ಮಾ ಅವರ ಅರ್ಜಿಯನ್ನು ಆಧರಿಸಿದೆ. ಮಾಸ್ಕ್ ಹಾಕಿಕೊಳ್ಳದೆ, ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದಾಗ ಪೊಲೀಸರು ತಡೆದಿದ್ದು, ಆ ಸಂದರ್ಭದಲ್ಲಿ ಪೊಲೀಸರು ವಿಧಿಸಿದ ೫೦೦ ರೂಪಾಯಿ ದಂಡವನ್ನು ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು.
ದೆಹಲಿಯ ಆಮ್ ಆದ್ಮೀ ಪಕ್ಷ ಸರ್ಕಾರ ಕೂಡ ಖಾಸಗಿ ಅಥವಾ ಸಾರ್ವಜನಿಕ ವಾಹನಗಳಲ್ಲಿ ಎಲ್ಲರಿಗೂ ಮಾಸ್ಕ್ ಕಡ್ಡಾಯ ಮಾಡಿತ್ತು. ದೆಹಲಿ ಸರ್ಕಾರ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಿದೆ. ಆದರೆ, ಒಬ್ಬಂಟಿಯಾಗಿ ವಾಹನ ಚಲಾಯಿಸುವ ವ್ಯಕ್ತಿಯು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದರು.
ಇನ್ನಿಬ್ಬರು ಅರ್ಜಿದಾರರು ಏಕಾಂಗಿಯಾಗಿ ವಾಹನ ಚಲಾಯಿಸುವಾಗ ಮುಖವಾಡ ವಿಲ್ಲದೆ ಹೋಗಿದ್ದಕ್ಕಾಗಿ ೫೦೦ ರೂಪಾಯಿ ದಂಡಗಳನ್ನು ಪ್ರಶ್ನಿಸಿದ್ದರು. ಇವರು ತಮಗೆ “ಮಾನಸಿಕ ಕಿರುಕುಳ” ವಾಗಿದೆ ಎಂದು ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.