ಕಾರಿಡಾರ್‌ಗೆ ಭೂಮಿ; ಪರಿಹಾರಕ್ಕೆ ರೈತರ ಮನವಿ

ಮುಳಬಾಗಿಲು; ಜೂ.೧೩:ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಮರಗಿಡಗಳ ಪರಿಹಾರ ನೀಡುವಂತೆ ತಾಲೂಕು ಕಚೇರಿಯಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ನೊಂದ ರೈತರಿಂದ ವಿಶೇಷ ಭೂಸ್ವಾಧೀನ ಅಧಿಕಾರಿ ಕಿರಣ್ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
೮ ವರ್ಷಗಳ ಹಿಂದೆ ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ವಿಶೇಷಭೂಸ್ವಾಧೀನಾಧಿಕಾರಿಗಳು ಗಡಿಭಾಗದ ಏತರನಹಳ್ಳಿ, ಚುಕ್ಕನಹಳ್ಳಿ ೧೧ ಜನ ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ಅತಿ ಕಡಿಮೆ ಭೂಮಿ ಪರಿಹಾರ ನೀಡುವ ಮುಖಾಂತರ ಅಧಿಕಾರಿಗಳು ರೈತ ವಿರೋಧಿ ಧೋರಣೆ ಅನುಸರಿಸಿದ್ದಾರೆ ಎಂದು ನೊಂದ ರೈತ ಮಹಿಳೆ ಮಂಗಮ್ಮ ಅವ್ಯವಸ್ಥೆ ವಿರುದ್ಧ ಕಣ್ಣೀರು ಹಾಕಿದರು.
ಕೃಷಿಭೂಮಿಯಲ್ಲಿದ್ದ ಮರಗಿಡಗಳನ್ನು ಮಾರಾಟ ಮಾಡಲು ಅವಕಾಶಕೊಡದೆ ನೀವು ರಸ್ತೆ ಅಭಿವೃದ್ಧಿಗೆ ಅಡ್ಡಪಡಿಸಿದರೆ ನಿಮ್ಮನ್ನು ಜೈಲಿಗೆ ಹಾಕಿ ರಸ್ತೆ ಮುಗಿಯುವವರೆಗೂ ಬೇಲ್ ಸಿಗುವುದಿಲ್ಲ ಎಂದು ಬೆದರಿಸಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನಮ್ಮನ್ನು ವಂಚನೆ ಮಾಡಿ ಪ್ರತಿದಿನ ಕಚೇರಿಗೆ ಅಲೆಸಿಕೊಂಡು ಪರಿಹಾರವೂ ನೀಡದೆ ಪಿ ನಂಬರ್ ನೆಪದಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ನೊಂದ ರೈತ ಜನಾರ್ಧನ್, ವೆಂಕಟೇಶಪ್ಪ, ರಾಜಣ್ಣ ಮಾತನಾಡಿ, ಗಡಿಭಾಗದ ಎಲ್ಲಾ ರೈತರ ಜಮೀನು ಪಿ ನಂಬರ್‌ನಲ್ಲಿದೆ. ಆದರೆ, ಕಂದಾಯ ಸರ್ವೇ ಸಂಬಂಧಪಟ್ಟ ಅಧಿಕಾರಿಗಳು ಪಿ ನಂಬರ್ ದುರಸ್ಥಿಯಾದರೆ ಮರಗಿಡಗಳಿಗೆ ಪರಿಹಾರ ನೀಡಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆಂದು ೮ ವರ್ಷಗಳಿಂದ ಸಂಸದರು, ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತ ಎಲ್ಲಾ ಅಧಿಕಾರಿಗಳನ್ನು ಕೈಮುಗಿದು, ಕಾಲು ಹಿಡಿದು ಬೇಡಿಕೊಂಡರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಅಧಿಕಾರಿಗಳ ಮುಂದೆ ತಮ್ಮ ನೋವನ್ನು ಹಂಚಿಕೊಂಡರು.
ಈಗಾಗಲೇ ನಮ್ಮಿಂದ ಭೂಸ್ವಾಧೀನಾ ಮಾಡಿಕೊಂಡಿರುವ ಜಮೀನು ರಾಷ್ಟ್ರಪತಿಯವರ ಹೆಸರಿನಲ್ಲಿ ಪಹಣಿ ಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಪಿ ನಂಬರ್ ದುರಸ್ಥಿ ಮಾಡಲು ಸಾಧ್ಯವೇ. ಒಂದು ವೇಳೆ ದುರಸ್ಥಿ ಮಾಡಬೇಕಾದರೆ ಲಕ್ಷಲಕ್ಷ ಲಂಚವನ್ನು ನೀಡಬೇಕು. ಬಡ ರೈತರು ಎಲ್ಲಿಂದ ತರಬೇಕು. ಜೊತೆಗೆ ಆಂಧ್ರದ ಎಲ್ಲಾ ಪಿ ನಂಬರ್‌ಗೂ ಪರಿಹಾರ ವಿತರಣೆ ಮಾಡಿದ್ದಾರೆ. ಆ ರಾಜ್ಯದ ರೈತರಿಗೆ ಒಂದು ನ್ಯಾಯ, ಕರ್ನಾಟಕದ ರೈತರಿಗೆ ಒಂದು ನ್ಯಾಯವೇ ಎಂದು ಪ್ರಶ್ನೆ ಮಾಡಿದರು.
ಒಂದು ವಾರದೊಳಗೆ ನಮ್ಮ ಪರಿಹಾರವನ್ನು ನೀಡದೇ ಇದ್ದರೆ ಖಂಡಿತವಾಗಿಯೂ ರಸ್ತೆ ಅಭಿವೃದ್ಧಿ ನಡೆಯುತ್ತಿರುವ ನಮ್ಮ ಭೂಮಿಯಲ್ಲಿಯೇ ಜಾನುವಾರುಗಳು, ಕುಟುಂಬ ಸದಸ್ಯರ ಸಮೇತ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನು ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದರು.
ಮನವಿ ಸ್ವೀಕರಿಸಿ ಅವರು ಮಾತನಾಡಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದ ಜೊತೆ ಮಾತನಾಡಿ ಪರಿಹಾರ ಕಲ್ಪಿಸುವ ಭರವಸೆಯನ್ನು ನೀಡಿದರು.
ಸಭೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಚಂಗೇಗೌಡ, ರಾಮಕೃಷ್ಣಪ್ಪ, ರಾಜ್ಯ ಪ್ರ.ಕಾ. ಫಾರೂಖ್ ಪಾಷ, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹೆಬ್ಬಣಿ ಆನಂದರೆಡ್ಡಿ, ಭಾಸ್ಕರ್, ರಾಜೇಶ್, ಆದಿಲ್ ಪಾಷ, ವಿಜಯ್ ಪಾಲ್, ಜುಬೇರ್ ಪಾಷ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಗಿರೀಶ್, ರಾಮಸಾಗರ ವೇಣು, ಮಾಸ್ತಿ ವೆಂಕಟೇಶ್, ಯಲ್ಲಣ್ಣ, ಹರೀಶ್ ಮುಂತಾದವರಿದ್ದರು.