ಬಸ್- ಕಾರ್ ಡಿಕ್ಕಿ: ಕಂಪ್ಯೂಟರ್ ಆಪರೇಟರ್ ಸಾವು, ಮೂವರು ಮಹಿಳೆಯರಿಗೆ ಗಂಭೀರ ಗಾಯ

ಕಲಬುರಗಿ,ಜೂ.10: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿ ಓರ್ವ ಕಂಪ್ಯೂಟರ್ ಆಪರೇಟರ್ ಮೃತಪಟ್ಟಿದ್ದು, ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಪಾಣೇಗಾಂವ್ ಹತ್ತಿರ ಶನಿವಾರ ಮಧ್ಯಾಹ್ನ ವರದಿಯಾಗಿದೆ.
ಕಾರಿನಲ್ಲಿದ್ದ ಮೂವರು ಮಹಿಳೆಯರೂ ಸೇರಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಬಸ್ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಯಡ್ರಾಮಿ ತಾಲ್ಲೂಕಿನ ಮಾಗಣಗೇರಾ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ರುದ್ರಗೌಡ ಶಿವಣಗೌಡ ಮಾಗಣಗೇರಾ(32) ಎಂಬುವವರು ಮೃತಪಟ್ಟಿದ್ದಾರೆ. ಮೂವರು ಮಹಿಳಾ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬಸ್ ಹೊಡೆದ ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ನುಜ್ಜಾಗಿದೆ. ಆದಾಗ್ಯೂ, ಕಾರಿನಲ್ಲಿದ್ದವರನ್ನು ಹೊರತರಲು ಹರಸಾಹಸ ಪಡಬೇಕಾಯಿತು. ಕಾರಿನೊಳಗೆ ರುದ್ರಗೌಡ ಮಾಗಣಗೇರಾ ಅವರು ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಹೊರತರಲು ಸಾಕಷ್ಟು ಪ್ರಯಾಸಪಟ್ಟರು. ನಂತರ ಕ್ರೇನ್ ಬಳಸಿ ಕಾರನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಗಾಯಾಳುಗಳಾದ ಮುಕ್ತುಂಬಾಯಿ ಗಂಡ ರೆಹಮಾನಸಾಬ್, ದೇವಕಿ ಗಂಡ ರಾಮು ಮಾದರ್ ಮತ್ತು ದ್ಯಾಮವ್ವ ಗಂಡ ಕಲ್ಲಪ್ಪ ಕೈನೂರ್ ಅವರೂ ಸೇರಿ ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದಾಗ್ಯೂ, ರುದ್ರಗೌಡ ಚಿಕಿತ್ಸೆ ಫಲಿಸದೇ ಮೃತಪಟ್ಟರು. ಈ ಕುರಿತು ಸಂಚಾರಿ ಪೋಲಿಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


ಬೈಕ್ ಸವಾರನಿಗೆ ಗಾಯ
ಜಿಲ್ಲೆಯ ಸೈಯದ್ ಚಿಂಚೋಳಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನ ಹೆಸರು ತಿಳಿದುಬಂದಿಲ್ಲ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.