ಕಾರಿಗೆ ಬಸ್ ಡಿಕ್ಕಿ:ಇಬ್ಬರ ಸಾವು

ಬಸವಕಲ್ಯಾಣ,ಮಾ.31-ರಾಜಕೀಯ ಪಕ್ಷಗಳ ಸಮಾವೇಶದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದವರ ಕಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಬಂದೇನವಾಜ್ ವಾಡಿ ಗ್ರಾಮದ ಕ್ರಾಸ್ ಬಳಿ ನಡೆದಿದೆ.
ತಾಲ್ಲೂಕಿನ ಗದಲೇಗಾಂವ್ ತಾಂಡಾದ ಸುಭಾಷ್ ಚವ್ಹಾಣ್ (55) ಹಾಗೂ ಹಾರಕೂಡ ಗ್ರಾಮದ ಚಿತ್ತಣ್ಣ ಮರೆಪ್ಪ ಗುಡ್ಡೆ (55) ಘಟನೆಯಲ್ಲಿ ಮೃತಪಟ್ಟವರು. ಗದಲೇಗಾಂವ್ ತಾಂಡಾದ ತುಕಾರಾಮ ಚವ್ಹಾಣ, ಭೀಮಶಾ ಚವ್ಹಾಣ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಕಾರಿನಲ್ಲಿ ಗ್ರಾಮಕ್ಕೆ ಮರಳುವಾಗ ಎದುರಿನಿಂದ ಬಂದ ಸಾರಿಗೆ ಬಸ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.