ಕಾರಿಗೆ ಅಪರಿಚಿತ ವಾಹನ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಾಯ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಫೆ.14 :- ತಮಿಳುನಾಡಿನಿಂದ ಬೆಂಗಳೂರು ಮೂಲಕ ಕೂಡ್ಲಿಗಿ ಮಾರ್ಗವಾಗಿ  ಸಂಡೂರಿಗೆ ಸ್ಕಾರ್ಪಿಯೋದಲ್ಲಿ  ಹೊರಟಿದ್ದ ವಾಹನಕ್ಕೆ ವಿಧಿಯಾಟ ಎಂಬಂತೆ  ಅಪರಿಚಿತ ವಾಹನವೊಂದು ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರಲ್ಲಿ ಓರ್ವ ಮೃತಪಟ್ಟಿದ್ದು ಇನ್ನುಳಿದ ಮೂವರಿಗೆ ತೀವ್ರಗಾಯಾಗಳಾಗಿ ಬಳ್ಳಾರಿ ವಿಮ್ಸ್ ಗೆ ದಾಖಲಾಗಿರುವ ಘಟನೆ ಮಧ್ಯರಾತ್ರಿ ಕೂಡ್ಲಿಗಿ ಹೊರವಲಯದ ಗೌಡ್ರು ಪೆಟ್ರೋಲ್ ಬಂಕ್ ಸಮೀಪದ ಫ್ಲೈ ಓವರ್ ನ ಹೈವೇ 50ರ ರಸ್ತೆಯಲ್ಲಿ ಜರುಗಿದೆ.
ಸಂಡೂರಿನ ಕುರಿಮೆಹಟ್ಟಿಯ ಜಯಕುಮಾರ (60)ಮೃತಪಟ್ಟವನಾಗಿದ್ದಾನೆ. ಜಯಣ್ಣ (54), ಶ್ರೀಕಾಂತ (53) ಹಾಗೂ ಡಿ. ನೆಹರು (48) ನರಸಾಪುರ ಗ್ರಾಮ, ಹಾಲಿ ವಾಸ ಸಂಡೂರು ಎಂದು ತಿಳಿದಿದ್ದು ಇವರುಗಳಿಗೆ ತೀವ್ರಗಾಯಾಗಳಾಗಿ ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳ್ಳಾರಿ ವಿಮ್ಸ್ ಗೆ ದಾಖಲು  ಮಾಡಲಾಗಿದೆ ಎಂದು ತಿಳಿದಿದೆ.
ಘಟನೆ ವಿವರ :
ಈ ನಾಲ್ವರು ತಮಿಳುನಾಡಿನ ನಾಮೆಕಲ್ ಕಡೆಯಿಂದ ಬೆಂಗಳೂರು ಮೂಲಕ ಕೂಡ್ಲಿಗಿ ಮಾರ್ಗವಾಗಿ ಸ್ವಗ್ರಾಮ ಸಂಡೂರು ಕಡೆಗೆ ಹೋಗಲು ಸ್ಕಾರ್ಪಿಯೋ ವಾಹನದಲ್ಲಿ ಕೂಡ್ಲಿಗಿ ಸರ್ವಿಸ್ ರಸ್ತೆ ಬದಲಾಗಿ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯ ಕೂಡ್ಲಿಗಿ ಹೊರವಲಯದ ಪ್ಲೈ ಓವರ್ ರಸ್ತೆಯಲ್ಲಿ  ಕಾರಿನ ವೇಗ ಕಡಿಮೆಯಾಗಲು ಮಧ್ಯರಾತ್ರಿ 12ಗಂಟೆ ಸುಮಾರಿಗೆ  ಹಿಂಬದಿಯಿಂದ ಬಂದ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಹಾಗೇ ಹೋಗಿದ್ದು ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು ತಕ್ಷಣ ಅವರನ್ನು ಕೂಡ್ಲಿಗಿ ಅಂಬ್ಯುಲೆನ್ಸ್ ನಲ್ಲಿ ಕೂಡ್ಲಿಗಿ ಆಸ್ಪತ್ರೆಗೆ ಕರೆ ತರಲಾಗಿ ತೀವ್ರಗಾಯವಾಗಿದ್ದ ಜಯಕುಮಾರ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ವೈದ್ಯರು ದೃಢಪಡಿಸಿದ್ದಾರೆ, ನಂತರ ಜಯಣ್ಣ, ಶ್ರೀಕಾಂತ ಹಾಗೂ ನೆಹರು ಇವರುಗಳನ್ನು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.