ಕಾರಿಗನೂರು ಕ್ರಾಸ್ ನಲ್ಲಿ ಸ್ಯಾನಿಟೈಸೇಷನ್ ಮಾಡಲು ಮನವಿ

ದಾವಣಗೆರೆ.ಜೂ.೨; ತಾಲೂಕಿನ ಕಾರಿಗನೂರು ಕ್ರಾಸ್ ಪ್ರದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್.ಸಂತೋಷ ಕುಮಾರ  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಜಗತ್ತನ್ನೇ ಬಾಧಿಸುತ್ತಿರುವ ಕೊರೋನಾ ಮಹಾಮಾರಿಯು ನಗರ/ಪಟ್ಟಣ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲೂ ವ್ಯಾಪಿಸುತ್ತಿರುವುದು ಸರಿಯಷ್ಟೆ. ದಾವಣಗೆರೆ ತಾಲೂಕು ಕುಕ್ಕುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಿಗನೂರು ಕ್ರಾಸ್ಪ್ರದೇಶದಲ್ಲಿ ಕಳೆದೊಂದು ವಾರದಿಂದ 6 ಕೊರೋನಾ ಪಾಸಿಟಿವ್ ಕೇಸ್ ವರದಿಯಾಗಿದ್ದು, ಈ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ. ಆದರೂ ಗ್ರಾಮ ಪಂಚಾಯಿತಿ ವತಿಯಿಂದ ಸದರಿ ಪ್ರದೇಶದಲ್ಲಿ ಸ್ಯಾನಿಟೈಸೇಷನ್ ಸೇರಿದಂತೆ ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸರ್ಕಾರದ ಹೊಸ ನಿಯಮಾವಳಿಯಂತೆ ಕೊರೋನಾ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕಿದ್ದು, ಹೋಂ ಐಸೊಲೇಷನ್‌ಗೆ ಅವಕಾಶವಿಲ್ಲ. ಆದರೂ ಕಾರಿಗನೂರು ಕ್ರಾಸ್ಪ್ರದೇಶದಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಕೆಲಸವಾಗಿಲ್ಲ. ಸೋಂಕಿತರ ಕುಟುಂಬದವರು ಯಾರೂ ಹೊರಗೆ ಬರದಂತೆ ಮಾತ್ರ ಕುಕ್ಕುವಾಡ ಗ್ರಾಪಂ ಪಿಡಿಓ ಹೇಳುತ್ತಿದ್ದಾರೆ. ಇದರಿಂದಾಗಿ ದೈನಂದಿನ ಅವಶ್ಯಕತೆಗಳಿಗಾಗಿ ಸೋಂಕಿತರ ಕುಟುಂಬದವರು ಪರದಾಡುವಂತಾಗಿದೆ. ಅಲ್ಲದೆ, ಸುತ್ತಮುತ್ತಲಿನ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಅವರು ದೂರಿದರು.