ಕಾರಾಗೃಹ ಬಂದಿಗಳಿಗೆ ಮನಪರಿವರ್ತನೆ ಕಾರ್ಯಕ್ರಮಃ ಬಂದಿ ನಿವಾಸಿಗಳು ಖಿನ್ನತೆಗೆ ಒಳಗಾಗಬಾರದು: ಬಿ.ನಾಗರಾಜು

ವಿಜಯಪುರ, ಜು.31-ಸಂಗೀತ ಮನರಂಜನೆ ಮತ್ತು ನಗೆ ಹಾಸ್ಯ ಕಾರ್ಯಕ್ರಮದ ಮೂಲಕ ಕಾರಾಗೃಹ ಬಂದಿಗಳಿಗೆ ಮನ ಪರಿವರ್ತನೆಯ ಅರ್ಥಪೂರ್ಣ ಕಾರ್ಯಕ್ರಮವು ಜುಲೈ 30ರಂದು ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ ನಡೆಯಿತು. ಕಾರಾಗೃಹದಲ್ಲಿನ ಬಂದಿಗಳು ತಮ್ಮಲ್ಲಿನ ಅಪರಾಧಿಕ ಮನೋಭಾವನೆಯನ್ನು ತೊಡೆದು ಹಾಕಲು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಿದ್ದು ವಿಶೇಷವಾಗಿತ್ತು.
ಕಾರಾಗೃಹ ಮತ್ತು ಸುಧಾರಣಾ ಸೇವೆ, ಕೇಂದ್ರ ಕಾರಾಗೃಹ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ನಡೆದ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಂದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಾಗೃಹದಲ್ಲಿ ಈ ರೀತಿಯ ಮನಪರಿವರ್ತನೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಇನ್ಮುಂದೆ ಕಾರಾಗೃಹದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹಾಡು, ಭಾಷಣ, ಜಾನಪದ ಕಲೆ, ನಾಟಕ ತರಬೇತಿ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತದಂತಹ ಕಾರ್ಯಕ್ರಮಗಳಿಗೆ ವಿವಿಧ ಕಲಾವಿದರನ್ನು ಕರೆತಂದು ನೀಡಲಾಗುವುದು. ಈ ಮೂಲಕ ಬಂದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರಾಗೃಹ ಇಲಾಖೆಯ ಕಾರ್ಯಕ್ಕೆ ಕೈಜೋಡಿಸಲಾಗುದೆಂದು ಹೇಳಿದರು.
ಕಾರಾಗೃಹದ ಅಧೀಕ್ಷಕರಾದ ಡಾ.ಐ.ಜೆ.ಮ್ಯಾಗೇರಿ ಅವರು ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ ಕೇವಲ ಮನರಂಜನೆ ಮಾತ್ರವಲ್ಲ; ವಿವಿಧ ಸಾಮಾಜಿಕ ಹಿನ್ನಲೆಯಿಂದ ಬಂದಿರುವ ಬಂದಿಗಳಿಗೆ ಕಲೆ, ಸಾಹಿತ್ಯ, ನಾಟಕ ತರಬೇತಿಯಂತ ವಿವಿಧ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹಮ್ಮಿಕೊಂಡು ಬಂದಿಗಳ ಮನಃಪರಿವರ್ತನೆ ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುವುದಾಗಿದೆ. ವಿಜಯಪುರ ಜಿಲ್ಲೆಯ ಸಾಹಿತಿಗಳನ್ನು, ಚಿಂತಕರನ್ನು, ಪ್ರಸಿದ್ಧ ಕಲಾವಿದರನ್ನು, ಕರೆಯಿಸಿ ಬಂದಿಗಳಿಗೆ ಉತ್ತಮ ಜೀವನ ನಿರ್ವಹಣೆಯ ಮತ್ತು ಅಪರಾಧ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸಲಾಗುದೆಂದು ತಿಳಿಸಿದರು.
ಕಾರಾಗೃಹದ ಸಹಾಯಕÀ ಅಧಿಕ್ಷಕರಾದ ಹೆಚ್.ಜಿ.ಮಂಜುನಾಥ ಮಾತನಾಡಿ, ಕಲುಷಿತ ನೀರು ಹೇಗೆ ಶುದ್ದೀಕರಣವಾಗುತ್ತದೋ ಹಾಗೆಯೇ ಬಂದಿನಿವಾಸಿಗಳು ತಮ್ಮ ಮನಸ್ಸನ್ನು ಈ ರೀತಿ ಕಾರ್ಯಕ್ರಮದ ಮೂಲಕ ಶುದ್ಧೀಕರಣಗೊಂಡು ದೇಶದ ಆಸ್ತಿಯಾಗಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಕಾರಾಗೃಹದ ಮನೋವೈದ್ಯರಾದ ಡಾ.ನಿರಂಜನ್ ಇಟ್ಟಣ್ಣವರ್, ಜೈಲರ್, ಸಹಾಯಕ ಜೈಲರ್ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು. ಶಕೀನಾಬೇಗಂ ನದಾಫ್ ನಿರೂಪಿಸಿದರು. ಜೈಲರ್ ಗೋಪಾಲಕೃಷ್ಣ ಕುಲಕರ್ಣಿ ವಂದಿಸಿದರು. ಲವಕುಮಾರ ಮನಗೂಳಿ ಅವರು ನಿರ್ವಹಿಸಿದರು.