ಕಾರನ್ನು ಅಡ್ಡಗಟ್ಟಿ ದರೋಡೆ

ಮಂಗಳೂರು, ಎ.೧- ಮಂಗಳೂರು-ಮೂಡಬಿದ್ರೆ ನಡುವಿನ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಸಮೀಪದ ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಬಳಿ ಕಾರೊಂದನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ಮೊಬೈಲ್ ಫೋನ್, ಹೆಡ್‌ಫೋನ್, ನಗದು ದೋಚಿದ ಘಟನೆ ಬುಧವಾರ ನಡೆದಿದೆ.

ಮೂಡಬಿದ್ರೆಯ ಸಿವಿಲ್ ಗುತ್ತಿಗೆದಾರರೊಬ್ಬರ ಮೂವರು ಕೆಲಸಗಾರರು ಆಲ್ಟೋ ಕಾರಿನಲ್ಲಿ ಪುತ್ತಿಗೆ ಹಾಗೂ ಕಡಪಲ್ಲದತ್ತ ಹೋಗುತ್ತಿದ್ದಾಗ ದುಷ್ಕರ್ಮಿಗಳ ತಂಡವು ನಗದು ಸಹಿತ ಸೊತ್ತು ದೋಚಿ ಮಂಗಳೂರಿನತ್ತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕೆಲಸಗಾರರು ನೀರುಮಾರ್ಗದಲ್ಲಿ ನಿರ್ಮಾಣ ಹಂತದ ಮನೆಯ ಕಾಮಗಾರಿ ಮುಗಿಸಿ ಮರಳುತ್ತಿದ್ದರು ಎನ್ನಲಾಗಿದೆ. ಗುರುಪುರ ದಾಟಿ ಬೆಳ್ಳಿಬೆಟ್ಟು ಬಸ್ ನಿಲ್ದಾಣಕ್ಕೆ ಹತ್ತಿರ ಎದುರಿನಲ್ಲಿ ನಿಂತಿದ್ದ ಶಿಫ್ಟ್ ಕಾರು ಏಕಾಏಕಿಯಾಗಿ ಆಲ್ಟೋ ಕಾರಿಗೆ ಅಡ್ಡಲಾಗಿ ನಿಂತಿತು ಎನ್ನಲಾಗಿದೆ. ಮರದ ತುಂಡು ತೋರಿಸಿ, ತಲವಾರು ಝಳಪಿಸಿದ ನಾಲ್ವರು ದುಷ್ಕರ್ಮಿಗಳು ತುಳುವಿನಲ್ಲಿ ಮೈಯಲ್ಲಿದ್ದ ಚಿನ್ನಾಭರಣ ಕೇಳಿದ್ದಾರೆ. ಬಳಿಕ ಮರದ ತುಂಡಿನಿಂದ ಆಲ್ಟೋ ಕಾರಿನ ಗ್ಲಾಸ್ ಪುಡಿಗೈದು ಮೂವರು ಕೆಲಸಗಾರರ ಜೇಬು ತಡಕಾಡಿದ್ದಾರೆ. ಅಲ್ಲದೆ 16,000 ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ನಗದು ಇದ್ದ ಪರ್ಸ್ ಕಸಿದಿದ್ದಾರೆ ಎಂದು ತಿಳಿದು ಬಂದಿದೆ. ಇದು ನಿರ್ಜನ ಪ್ರದೇಶವಾಗಿದ್ದು, ದುಷ್ಕರ್ಮಿಗಳಿಗೆ ದೋಚಲು ಸುಲಭವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ವಿನಯ್ ಗಾಂವ್ಕರ್ ಭೇಟಿ ನೀಡಿ ಪರಿಶೀಲಿಸಿದರು. ಬಜ್ಪೆ ಪೊಲೀಸರ ಜೊತೆ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.