ಕಾರಟಗಿ ಸೂಪರ್ ಸ್ಪೇಷಾಲಿಟಿ ಹಾಸ್ಪಿಟಲ್‍ನಲ್ಲಿ ಪ್ರಥಮ ವಾರ್ಷಿಕೋತ್ಸವ ಸಂಭ್ರಮ 

ಸಂಜೆವಾಣಿ ವಾರ್ತೆ

ಹುಬ್ಬಳ್ಳಿ.ಡಿ.೩೦: ಆಸ್ತಿ, ಅಂತಸ್ತು ಸಂಪಾದನೆಗಿಂತ ಹೆಚ್ಚು ದೊಡ್ಡದು ಬದುಕು. ಈ ಬದುಕನ್ನು ಉತ್ತಮ ಆರೋಗ್ಯ, ಖುಷಿಯಿಂದ ಕಳೆಯುವುದೇ ನಿಜವಾದ ಸಾಧನೆ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.ಇಲ್ಲಿನ ನೇತಾಜಿ ಕಾಲೋನಿಯಲ್ಲಿನ ಕಾರಟಗಿ ಸೂಪರ್ ಸ್ಪೇಷಾಲಿಟಿ ಹಾಸ್ಪಿಟಲ್’ನ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭೂಮಿಯಂತಹ ಸ್ವರ್ಗ ಮತ್ತೊಂದಿಲ್ಲ. ಇಲ್ಲಿ ಓರ್ವ ಜೀವಿ ಹುಟ್ಟಿ ಬೆಳೆಯಲು ಏನೇನು ಬೇಕು ಅವೆಲ್ಲವೂ ಇಲ್ಲಿವೆ. ಇಂತಹ ಸುಂದರವಾದ ಭೂಮಿಯಲ್ಲಿ ಮನುಷ್ಯ ಸಂತನಂತೆ ಬದುಕಬೇಕು ಎಂದರು.ಸಂತ ಎಂದರೆ ಮನೆ ಬಿಟ್ಟು ಹಿಮಾಲಯಕ್ಕೆ ಹೋಗಿ ತಪ್ಪಸು ಮಾಡುವುದು ಅಲ್ಲ, ಯಾರು ಮನಸ್ಸಿನಿಂದ ಸದಾ ಸಂತೋಷದಿಂದ ಇರುತ್ತಾರೆ ಅವರೇ ಅಂತರು. ಹೀಗಾಗಿ ಸದಾ ಸಂತೋಷದಿಂದ ಇರುವುದನ್ನು ಕಲಿಯಬೇಕು. ಭೂಮಿಗೆ ನಾವು ಕಸವನ್ನು ಹಾಕಿದರೇ ಅದು ಗೊಬ್ಬರವಾಗಿ ಮರ ಫಲ ಕೊಡುತ್ತದೆ. ನಿಸರ್ಗ ಇರುವುದು ಮನುಷ್ಯನಿಗಾಗಿ. ಹೀಗಾಗಿ ಆ ಭಗವಂತ ಕಲ್ಪಿಸಿರುವ ಜೀವನವನ್ನು ಸಂತೋಷದಿಂದ ಇರಬೇಕು ಎಂದು ತಿಳಿಸಿದರು.ಸಂಪತ್ತು ಇದ್ದರೆ ಮನುಷ್ಯ ಶ್ರೀಮಂತ ಆಗುವುದಿಲ್ಲ, ಬದಲಾಗಿ ಆರೋಗ್ಯ ಚೆನ್ನಾಗಿರಬೇಕು. ಇಲ್ಲದೇ ಹೋದರೆ ಸಂಪತ್ತು ಇದ್ದರೂ ಅದನ್ನು ಅನುಭವಿಸೋಕ್ಕೆ ಆಗುವುದಿಲ್ಲ. ಹೀಗಾಗಿ ಚೈತನ್ಯದಲ್ಲಿ ಸೋಲು, ಗೆಲುವು, ಬಡತನ, ಸಿರಿತನ ಏನೇ ಏಳು ಬೀಳು ಬಂದರೂ ಜೀವನವನ್ನು ಉತ್ಸಾಹದಿಂದ ಕಳೆಯಬೇಕು ಎಂದು ಶ್ರೀಗಳು ತಿಳಿಸಿದರು.ಇಂದಿನ ಮಕ್ಕಳಿಗೆ ನಾವು ಶ್ರೀಮಂತರಾಗುವುದನ್ನು ಹೇಳಿಕೊಡಬಾರದು, ಅವರಿಗೆ ಹೇಗೆ ಖುಷಿಯಿಂದ, ಆರೋಗ್ಯದಿಂದ ಇರಬೇಕೆಂಬುನ್ನು ಕಲಿಸಿಕೊಡಬೇಕು ಎಂದರು.ಈ ಸಂದರ್ಭದಲ್ಲಿ ವೈದ್ಯಕೀಯ ನಿರ್ದೇಶಕ ಡಾ.ಬಸವರಾಜ ಸಜ್ಜನ, ಕಾರಟಗಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸಂಸ್ಥಾಪಕ ಅಧ್ಯಕ್ಷ ಡಾ.ರಾಮಚಂದ್ರ ಕಾರಟಗಿ, ಡಾ.ವೀಣಾ ಕಾರಟಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.