ಕಾರಂತರ ಬಾಲವನಕ್ಕೆ ಯಕ್ಷಗಾನದ ‘ರಂಗಾಯಣ’ ಸ್ವರೂಪ

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಪುತ್ತೂರು, ನ.೧೮- ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಬಾಲವನವನ್ನು ಜನಾಕರ್ಷಣೆಯ ಕೇಂದ್ರವಾಗಿ ರೂಪಿಸಲು ಆಲೋಚಿಸಲಾಗುತ್ತಿದ್ದು, ಕಾರಂತರ ನೆನಪಿನಲ್ಲಿ ಪುತ್ತೂರಿನ ಬಾಲವನವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು. ಯಕ್ಷಗಾನ ಸ್ವರೂಪದ ರಂಗಾಯಣವನ್ನು ಬಾಲವನದಲ್ಲಿ ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು  ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಾಲವನವನ್ನು ಕಾರಂತರ ಆಶಯಕ್ಕೆ ಪೂರಕವಾಗಿ ಅಭಿವೃದ್ಧಿ ಪಡಿಸಲಾಗುವುದು. ಸ್ಥಳೀಯ ಶಾಸಕರಾದ ಸಂಜೀವ ಮಠಂದೂರು ಅವರು ಈ ಬಗ್ಗೆ ಉತ್ಸುಕರಾಗಿದ್ದಾರೆ. ಬಾಲವನವನ್ನು ಅದರ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡು ಸಾಂಪ್ರದಾಯಿಕ ಸ್ಥಿತಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಾಲವನದ ಅಭಿವೃದ್ಧಿ ವಿಚಾರದಲ್ಲಿ ಮುಂದಿನ ವಾರದಲ್ಲಿ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಹಯೋಗದಲ್ಲ ಸಭೆ ನಡೆಸಲಾಗುತ್ತಿದೆ. ಇಲ್ಲಿ ಕಾರಂತರ ನೆನಪಿನ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುವುದು. ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ತಹಸೀಲ್ದಾರ್ ರಮೇಶ್ ಬಾಬು ಇದ್ದರು.