ಕಾರಂಜಾ ಸಂತ್ರಸ್ಥರ ಬೇಡಿಕೆಗೆ ಸ್ಪಂದನೆ: ಭಗವಂತ ಖೂಬಾ

ಬೀದರ:ಫೆ.27:ಕಾರಂಜಾ ಸಂತ್ರಸ್ತರ 28 ಹಳ್ಳಿಯ ಸಂತ್ರಸ್ತರು ಪ್ರಮುಖರು ಮತ್ತು ಮಹಿಳೆಯರು ಸೇರಿದಂತೆ ನೂರಾರು ಜನ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರ ನಿವಾಸಕ್ಕೆ ಭೇಟಿ ನೀಡಿ ಸಂತ್ರಸ್ತರ ನ್ಯಾಯಯುತವಾದ ಬೇಡಿಕೆ ಬಗ್ಗೆ ಮನವರಿಕೆ ಮಾಡಿದರು. ಬಹುದಿನಗಳ ಕಾರಂಜಾ ಸಂತ್ರಸ್ಥರ ನ್ಯಾಯಯುತವಾದ ಬೇಡಿಕೆ ಈಡೇರಿಸುವುದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವದಾಗಿ ಸಂತ್ರಸ್ತರಿಗೆ ಭಗವಂತ ಖೂಬ ಅವರು ಭರವಸೆ ನೀಡಿದರು. ಸುಮಾರು ಎಂಟು ತಿಂಗಳಿಂದ ಬೀದರ್ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ತರಿಗೆ ಮಾನವೀಯತೆ ಮಾನದಂಡದ ಆಧಾರದ ಮೇಲೆ ವೈಜ್ಞಾನಿಕ ರೀತಿಯ ಪರಿಹಾರ ನೀಡಬೇಕೆಂದು ಕಾರಂಜ ಮುಳುಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ವತಿಯಿಂದ ಅಹೋರಾತ್ರಿ ಧರಣಿ ನಡೆಸಿಕೊಂಡು ಬರಲಾಗುತ್ತಿದೆ.

ಅಷ್ಟೇ ಅಲ್ಲದೆ ಎಲ್ಲಾ ಪಕ್ಷಗಳ ಸಂಘ ಸಂಸ್ಥೆ ಮತ್ತು ಸಂಘಟನೆಗಳಿಂದ ಮಾನವ ಸರಪಳಿ ಹೋರಾಟ ಮತ್ತು ಭಾರಿ ಪ್ರಮಾಣದ ವೆಹಿಕಲ್ ಜಾಥ ನಡೆಸಿ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ದೀರ್ಘಕಾಲದ ಹೋರಾಟದ ಸಂದರ್ಭದಲ್ಲಿ ಜಿಲ್ಲೆಯ ಸಂಸದರು ಮತ್ತು ಕೇಂದ್ರ ಸಚಿವರಾದ ಭಗವಂತ ಖೂಬ ಅವರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿರುವುದಿಲ್ಲ, ಇದನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತರ ನೂರಾರು ಜನರ ನಿಯೋಗ ಕೇಂದ್ರ ಸಚಿವರಿಗೆ ಭೇಟಿಯಾಗಿ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಕಾರಂಜ ಸಂತ್ರಸ್ಥರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸಲು ಮನವರಿಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಚಿವರಿಗೆ ಲಿಖಿತ ಮನವಿ ನೀಡಿ ಕಾಲಮಿತಿಯೊಳಗೆ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ಸಂತ್ರಸ್ತರ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಸೇರಿದಂತೆ ಪ್ರಮುಖ ಮುಖಂಡರು ಅವರಲ್ಲಿ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ರಾಜಕುಮಾರ ಕೋಸಂ, ಚಂದ್ರಕಾಂತ ಹಾಲಹಳ್ಳಿ, ಬಸವರಾಜ ಹಿಂದಾ,ರವೀಂದ್ರ ಪಾಟೀಲ, ಸಾಗರ ಖೇಣಿ, ಕಲ್ಯಾಣರಾವ ಚನಶೆಟ್ಟಿ, ಬಸವರಾಜ ಬಂಬಳಗಿ, ವೀರಯ್ಯಾ ಸ್ವಾಮಿ, ವೈಜಿನಾಥ ಭತಮುರಗಿ, ಮಾದಪ್ಪ ಸಂಗೋಳಗಿ ಉಪಸ್ಥಿತರಿದ್ದರು.