
ಬೀದರ್,ಜು.20- ಕಾರಂಜಾ ನೀರಾವರಿ ಯೋಜನೆಗೆ ಬೆಲೆಬಾಳುವ ಭೂಮಿ ನೀಡಿ, ವೈಜ್ಞಾನಿಕ ಪರಿಹಾರಕ್ಕಾಗಿ ಐದು ದಶಕದಿಂದ ಅಲೆದಾಡುತ್ತಿರುವ ಸಂತ್ರಸ್ತ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಚುಕ್ಕೆ ಗುರುತಿನ ಪ್ರಶ್ನೆ ಮೇಲೆ ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದ ಡಾ. ಬೆಲ್ದಾಳೆ ಅವರು, ಸಂತ್ರಸ್ತರ ಬೇಡಿಕೆಗೆ ಸರ್ಕಾರ ತಕ್ಷಣ ಸ್ಪಂದಿಸಿ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕು. ಪಕ್ಷಾತೀತವಾಗಿ ಈ ವಿಷಯಕ್ಕೆ ಆದ್ಯತೆ ನೀಡಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ಸಂತ್ರಸ್ತರ ಬೇಡಿಕೆ, ಸಮಸ್ಯೆ, ಅಲೆದಾಟದ ಕುರಿತು ಸಮಗ್ರ ಮಾಹಿತಿ ಸದನದ ಮುಂದಿಟ್ಟು, ಐದು ದಶಕದ ಬೇಡಿಕೆ ಇದಾಗಿದೆ. ವೈಜ್ಞಾನಿಕ ಪರಿಹಾರಕ್ಕಾಗಿ ಆಗ್ರಹಿಸುತ್ತ ಒಂದು ಪೀಳಿಗೆಯೇ ಕೊನೆಗೊಂಡಿದೆ. ಇನ್ನೆಷ್ಟು ದಿನ ರೈತರು ಸಂಘರ್ಷ ಮಾಡಬೇಕು? ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಇದಕ್ಕೆ ಇನ್ನಾದರೂ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಬಗ್ಗೆ ಉಪ ಮುಖ್ಯಮಂತ್ರಿಗಳಾದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ವಿಶೇಷ ಕಾಳಜಿ ವಹಿಸಿ ಸಂತ್ರಸ್ತರ ಸಂಕಷ್ಟ ನಿವಾರಿಸುವಂತೆ ಒತ್ತಾಯಿಸಿದರು.
ಕಾರಂಜಾ ಯೋಜನೆಯಲ್ಲಿ ಸಾವಿರಾರು ರೈತ ಕುಟುಂಬಗಳು ತಮ್ಮ ಫಲವತ್ತಾದ ಜಮೀನು ನೀಡಿದ್ದಾರೆ. ಆದರೆ ಸರ್ಕಾರ ಕೊಟ್ಟ ಪರಿಹಾರ ಎಕರೆಗೆ ಕೇವಲ ಮೂರರಿಂದ ನಾಲ್ಕು ಸಾವಿರ ಅಷ್ಟೆ. ಸಂತ್ರಸ್ತರಲ್ಲಿ ಕೆಲವರು ಕೋರ್ಟ್ ಮೆಟ್ಟಿಲೇರಿ ಸ್ವಲ್ಪ ಹೆಚ್ಚುವರಿ ಪರಿಹಾರ ಪಡೆದಿದ್ದಾರೆ. ಅದರೆ ಹೆಚ್ಚಿನವರು ನ್ಯಾಯಾಲಯಕ್ಕೆ ಹೋಗಲಿಲ್ಲ. ರೈತರ ಬೇಡಿಕೆ ಕೊನೆಯಗಿಲ್ಲ. ಹೋರಾಟ ಸಹ ನಿಂತಿಲ್ಲ. ಸುಮಾರು ಒಂದು ವರ್ಷದಿಂದ ರೈತರು ಅವಿರತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಇವರ ಬೇಡಿಕೆ ಬಗ್ಗೆ ಮರು ಪರಿಶೀಲನೆ ನಡೆಸಿ, ವೈಜ್ಞಾನಿಕ ಪರಿಹಾರಕ್ಕಾಗಿ ಸಂತ್ರಸ್ತ ರೈತರಿಗೆ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಿದರು.
ಕಾರಂಜಾ ಜಲಾಶಯ ನಿರ್ಮಾಣ ವೇಳೆ ರೈತರ ಜಮೀನು 1970-71ರಲ್ಲಿ ಭೂ ಸ್ವಾಧೀನ ನಡೆದಿದೆ. 1982ರಲ್ಲಿ ಕೆಲ ನಿರಾಶ್ರಿತರಿಗೆ ಪರಿಹಾರ ದೊರೆತಿದೆ. ಅದರಲ್ಲಿ ಒಟ್ಟು 24462 ಎಕರೆ ಭೂಸ್ವಾಧೀನವಾಗಿದೆ. ಡ್ಯಾಮ್ ಹಿನ್ನೀರಿನ ಪ್ರದೇಶದಲ್ಲಿ 3000 ರೈತರ ಹೆಚ್ಚುವರಿ ಭೂಮಿ ಸಹ ಮುಳುಗಡೆಯಾಗಿದೆ. ಇದರಿಂದ 50 ಸಾವಿರಕ್ಕೂ ಹೆಚ್ಚು ಜನ ಸಮಸ್ಯೆ ಎದುರಿಸುವಂತಾಗಿದೆ. ಸಂತ್ರಸ್ತರಲ್ಲಿ ಕೇವಲ 500 ಕುಟುಂಬಗಳು ಮಾತ್ರ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನುಳಿದವರು ಕಾರಣಾಂತರದಿಂದ ಕೋರ್ಟ್ ಮೇಟ್ಟಿಲೇರದ ಕಾರಣ ಅವರಿಗೆ ಪರಿಹಾರ ದೊರೆತಿಲ್ಲ. ಈ ಜಲಾಶಯದಲ್ಲಿ ಬೀದರ್ ದಕ್ಷಿಣ, ಹುಮನಾಬಾದ, ಭಾಲ್ಕಿಯ ರೈತರ ಜಮೀನು ಒಳಗೊಂಡಿದೆ. ಇದರಲ್ಲಿ 10 ಗ್ರಾಮ ಪೂರ್ಣ ಮುಳುಗಡೆಯಾಗಿದೆ. ಪುನರ್ವಸತಿ ಗ್ರಾಮಗಳಲ್ಲಿ ಸಹ ಪೂರ್ಣ ಪ್ರಮಾಣದ ಸೌಲಭ್ಯ ದೊರೆತಿಲ್ಲ ಎಂದು ಸದನದ ಗಮನ ಸೆಳೆದರು.
ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹೈ ಪವರ್ ಕಮಿಟಿ ರಚನೆಯಾಗಿ 50 ಕೋಟಿ ರೂ. ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು ನಿರ್ಧಾರವಾಗಿತ್ತು. ಆದರೆ ಅದು ಅಲ್ಲೇ ನೆನೆಗುದಿಗೆ ಬಿದ್ದಿದೆ. 2013ರಲ್ಲಿ ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದಾಗ ಇದನ್ನು ವಿಶೇಷ ಪ್ರಕರಣ ಎಂದು ಆರ್ಥಿಕ ಇಲಾಖೆಗೆ ಕಳಿಸಲಾಗಿತ್ತು. ನಂತರ ಚುನಾವಣೆ ಘೋಷಣೆಯಾದ ಬಳಿಕ ಅದು ಸಹ ಹಾಗೆಯೇ ಉಳಿಯಿತು. 2018ರಲ್ಲಿ ಡಿಕೆ ಶಿವಕುಮಾರ್ ಅವರು ಜಲ ಸಂಪನ್ಮೂಲ
ಸಚಿವರಿದ್ದಾಗ ಸಂತ್ರಸ್ತರ ಸಭೆ ಕರೆದು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ತಾವು ಡಿಸಿಎಂ ಜೊತೆಗೆ ನೀರಾವರಿ ಸಚಿವರಾಗಿದ್ದಿರಿ. ಈ ಕುರಿತು ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದರು.
ಬಳಿಕ ಮಾತನಾಡಿದ ಡಿಕೆ ಶಿವಕುಮಾರ್ ಅವರು ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ಮಾಹಿತಿ ಪಡೆದಿದ್ದೇನೆ. ಇದೀಗ ಮತ್ತೊಮ್ಮೆ ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಕುರಿತು ಒಂದು ದಿನಾಂಕ ನಿಗದಿ ಮಾಡಿ ಎಲ್ಲ ಶಾಸಕರು, ಉಸ್ತುವಾರಿ ಸಚಿವರ ಜತೆ ಸೇರಿ ಸಂತ್ರಸ್ತರ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಸಹ ಕಾರಂಜಾ ರೈತರಿಗೆ ಸೂಕ್ತ ಪರಿಹಾರ ಸಿಗಬೇಕು. ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಶಾಸಕ ಬೆಲ್ದಾಳೆ ಅವರ ಪ್ರಶ್ನೆಗೆ ಬೆಂಬಲ ಸೂಚಿಸಿದರು.