ಕಾರಂಜಾ ಸಂತ್ರಸ್ತರಿಗೆ ನೆರವಾಗುವಂತೆ ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ಜ.10: ಕಾರಂಜಾ ಸಂತ್ರಸ್ತ ರೈತರಿಗೆ ಕೂಡಲೇ ನ್ಯಾಯಯುತವಾದ ಪರಿಹಾರ ಒದಗಿಸಿಕೊಡುವಂತೆ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಸಮಿತಿಯವರು ಬರೆದಿದ್ದ ಮನವಿ ಪತ್ರವನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಸಲ್ಲಿಸಿದರು.
ಬೀದರ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೋಮವಾರ ಸಂಜೆ ಬೀದರ್ ಕೋಟೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಕಾರಂಜಾ ಸಂತ್ರಸ್ತ ರೈತರ ಸಂಘದ ಪರವಾಗಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಉತ್ಸವ ವೇದಿಕೆಯಲ್ಲಿಯೇ ಮನವಿ ಪತ್ರ ಸಲ್ಲಿಸಿದರು.
ಗೋದಾವರಿ ಜಲಾನಯನ ಪ್ರದೇಶದ ಕಾರಂಜಾ ಯೋಜನೆಯಲ್ಲಿ ಭೂಮಿ ಮತ್ತು ಮನೆ ಕಳೆದುಕೊಂಡ ಕುಟುಂಬದವರಿಗೆ 371ನೇ(ಜೆ) ಕಲಂ ವಿಶೇಷ ಸ್ಥಾನಮಾನದಡಿ ಮಾನವೀಯತೆಯ ಮಾನದಂಡದಂತೆ ವೈಜ್ಞಾನಿಕ ರೀತಿಯಂತೆ ಸಮರ್ಪಕ ಪರಿಹಾರ ನೀಡಬೇಕು. ಹೆಚ್ಚುವರಿಯಾಗಿ ಭೂಮಿ ಸ್ವಾಧೀನಪಡಿಸಿಕೊಂಡಂತವರಿಗೆ ಏಕರೂಪ ಮಾನದಂಡದಂತೆ ತಾರತಮ್ಯ ಮಾಡದೇ ಪರಿಹಾರ ಹಣ ನೀಡಬೇಕು.
ಕೃಷ್ಣಾ ಮತ್ತು ಗೋದಾವರಿ ಜಲಾನಯನ ಪ್ರದೇಶದ ಯೋಜನೆಗಳಿಗೆ ಕೇಂದ್ರ ಸರಕಾರ ಒಂದೇ ಸೂರಿನಡಿ ಸೇರಿಸಿ ಆ ಮುಖಾಂತರ ಕೇಂದ್ರದ ಕಛೇರಿ ಹೈದ್ರಾಬಾದನಲ್ಲಿ ಸ್ಥಾಪಿಸಿ ಅಲ್ಲಿಂದ ಆಡಳಿತಾತ್ಮ ವ್ಯವಸ್ಥೆ ಕೈಗೊಂಡಿದೆ. ಹೀಗಿರುವಾಗ ಗೋದಾವರಿ ಕಣಿವೆ ಪ್ರದೇಶದ ಕಾರಂಜಾ ಸೇರಿದಂತೆ ಚುಳಕಿ ನಾಲಾ ಯೋಜನೆ ಮತ್ತು ಭೀಮಾ ಉಪ ಯೋಜನೆಗಳು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಆಡಳಿತಾತ್ಮಕವಾಗಿ ಸೇರಿಸಿ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು.
ಕೃಷ್ಣಾ ಭಾಗ್ಯ ಜಲ ನಿಗಮದಡಿ ಕೃಷ್ಣಾ ಮೇಲದಂಡೆ ಯೋಜನೆಯಡಿ ಜಮೀನು ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗೆ ನೀಡಿರುವ ಮಾನದಂಡದಂತೆ ಕಾರಂಜಾ ಸಂತ್ರಸ್ತರಿಗೂ ಸಮರ್ಪಕ ಪರಿಹಾರ ಧನ ನೀಡಬೇಕು. ಗೋದಾವರಿ ಜಲಾನಯನ ಪ್ರದೇಶದ ನಮ್ಮ ಪಾಲಿನ ಬಾಕಿ ನೀರು ಬಳಸಿಕೊಳ್ಳಲು ತಕ್ಷಣ ಕ್ರಮಕೈಗೊಳ್ಳಬೇಕು.
ಕಾರಂಜಾ ಸಂತ್ರಸ್ತರಿಗೆ ಮಾನವಿಯತೆ ಮಾನದಂಡದಂತೆ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಸಮಪರ್ಕ ವೈಜ್ಞಾನಿಕ ಪರಿಹಾರ ಮೊತ್ತ ನೀಡಬೇಕು. ಇಲ್ಲವೇ ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನದಡಿ ಇರುವ ಸ್ವಾಯತ್ಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ ಆ ಮೂಲಕವಾದರು ಸಂತ್ರಸ್ತರಿಗೆ ಪರಿಹಾರ ಒದಗಿಸಿಕೊಡಬೇಕೆಂದು ಕಾರಂಜಾ ಸಂತ್ರಸ್ತರು ಬರೆದಿದ್ದ ಮನವಿ ಪತ್ರವನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಸಲ್ಲಿಸಿದರು.