ಕಾರಂಜಾ ರೈತ ಸಂತ್ರಸ್ತರಿಂದ ನಾಳೆ ವರ್ಷಾಚರಣೆಯ ವಿನೂತನ ಹೋರಾಟ

ಬೀದರ :ಜೂ.30: ಕಾರಂಜಾ ನೀರಾವರಿ ಯೋಜನೆಗಾಗಿ ಹೊಲ, ಮನೆ, ಮಠ ಕಳೆದುಕೊಂಡ ರೈತ ಸಂತ್ರಸ್ತರು ವೈಜ್ಞಾನಿಕ ಮಾನದಂಡದಂತೆ, ಸಮರ್ಪಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ ಹೋರಾಟ ಜೂನ್-30ಕ್ಕೆ ಒಂದು ವರ್ಷ ಮುಗಿಯುತ್ತದೆ. ಈ ಹಿನ್ನಲೆಯಲ್ಲಿ ಒಂದು ವರ್ಷ ಗತಿಸಿರುವ ಸತ್ಯಾಗ್ರಹದ ವರ್ಷಾಚರಣೆಯನ್ನು ಮತ್ತು ನ್ಯಾಯಯುತವಾದ ಬೇಡಿಕೆಗೆ ಸರ್ಕಾರದ ಗಮನ ಸೆಳೆಯಲು ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಜುಲೈ-1 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುಗಡೆ ವಿನೂತನ ಮಾದರಿಯ ಹೋರಾಟವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಮಹತ್ವದ ಹೋರಾಟಕ್ಕೆ ಕಾರಂಜಾ ರೈತ ಸಂತ್ರಸ್ತರು ಅಂದು ಮುಂಜಾನೆ 10.30 ಗಂಟೆಗೆ ಕಾರಂಜಾ ಸಂತ್ರಸ್ತರ ಸತ್ಯಾಗ್ರಹದ ಸ್ಥಳದಲ್ಲಿ ಸೇರಲು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಮನವಿ ಮಾಡಿಕೊಂಡಿದ್ದಾರೆ.

2023ರ ಜುಲೈ 1 ರಿಂದ ಕಾರಂಜಾ ರೈತ ಸಂತ್ರಸ್ತರ ನ್ಯಾಯಯುತವಾದ ಬೇಡಿಕೆಯನ್ನು ಮುಂದಿಟ್ಟುಕೊಂಡು ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಾ ಬರಲಾಗಿದೆ. ಅದರ ಜೊತೆಗೆ ಅನೇಕ ರೀತಿಯ ಬೃಹತ್ ಹೋರಾಟಗಳು ಸಹ ನಡೆಸಿ ಸರಕಾರಕ್ಕೆ ಒತ್ತಾಯಿಸಲಾಗಿದೆ.  ಇಷ್ಟೇಲ್ಲಾ ಆದರೂ ಸಹ ಹಿಂದಿನ ಸರಕಾರದಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳು, ಸಚಿವರುಗಳು ಗಾಂಧಿ, ಅಂಬೇಡ್ಕರ್ ಮಾರ್ಗದ ಮಾದರಿಯ ಹೋರಾಟಕ್ಕೆ ಕಿಂಚಿತ್ತೂ ಸ್ಪಂದಿಸದೆ ನಿರ್ಲಕ್ಷ, ಮಲತಾಯಿ ಧೋರಣೆ ಮಾಡಿದ್ದಾರೆ.
ನೂತನ ಸಿದ್ಧರಾಮಯ್ಯನವರ ಸರಕಾರ ರಚನೆಯಾದ ನಂತರ,  ನೂತನ ಸರಕಾರದ ಸಚಿವರಾದ ಈಶ್ವರ ಖಂಡ್ರೆಯವರು, ರಹಿಂಖಾನ್ ರವರು, ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಸ್ಪಂದನೆ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದ್ದು, ಇವರ ಭೇಟಿಯಿಂದ ನಮ್ಮ ಬೇಡಿಕೆಯ ಬಗ್ಗೆ ಆಶಾಕಿರಣ ಹುಟ್ಟಿದೆ. ಇದಕ್ಕೆ ಸಂಬಂಧಪಟ್ಟಂತೆ, ಮಹಾತ್ಮಾ ಗಾಂಧಿ ಮತ್ತು ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರ ಸತ್ಯಾಗ್ರಹ ಮಾರ್ಗದ ಸಂಪ್ರದಾಯದಂತೆ, ನಾವು ಮಾಡುತ್ತಿರುವ ಆಹೋ ರಾತ್ರಿ ಸತ್ಯಾಗ್ರಹ ಒಂದು ವರ್ಷಕ್ಕೆ ಕಾಲಿಟ್ಟಿರುವ ಹಿನ್ನಲೆಯಲ್ಲಿ ವರ್ಷಾಚರಣೆಯ ವಿನೂತನ ಹೋರಾಟ ಮಾಡುವ ಮುಖಾಂತರ ಸರಕಾರಕ್ಕೆ ನಮ್ಮ ಬೇಡಿಕೆಯ ಈಡೇರಿಸಲು ಗಮನ ಸೆಳೆಯಲು ಒತ್ತಾಯಿಸುತ್ತಿದ್ದೇವೆ. ಇದಕ್ಕೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಿ ನಮ್ಮ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಕಾರಂಜ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.