ಕಾರಂಜಾ ಡ್ಯಾಮ್ ಭಾಗಶಃ ಭರ್ತಿ: 983 ಕ್ಯೂಸೆಕ್ ನೀರು ಹೊರಕ್ಕೆ

ಬೀದರ್:ಸೆ.9: ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದೆ. ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮ ಸಮೀಪದ ಹಳ್ಳ ಉಕ್ಕು ಹರಿದು ವ್ಯಕ್ತಿಯೊಬ್ಬರ ನೀರು ಪಾಲಾಗಿದ್ದಾರೆ. ಕಾರಂಜಾ ಜಲಾಶಯದಿಂದ ನೀರು ಹೊರಗೆ ಬಿಡಲಾಗಿದೆ.

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯ ಭರ್ತಿಯಾಗಿದೆ.

ಜಲಾಶಯಕ್ಕೆ 1748 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಎರಡು ಕ್ರಸ್ಟ್‍ಗೇಟ್‍ಗಳನ್ನು ತೆರೆದು 983 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಕಾಲುವೆ ಹಾಗೂ ಮಾಂಜ್ರಾ ನದಿ ಪಾತ್ರದ ಜನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಬಸವಕಲ್ಯಾಣ ತಾಲ್ಲೂಕಿನ ಚುಳಕಿನಾಲಾ ಹಾಗೂ ಮುಲ್ಲಾಮಾರಿ ಜಲಾಶಯ ತುಂಬಿವೆ. ಬೀದರ್, ಹುಲಸೂರು ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ಒಂದು ತಾಸು ಮಳೆ ಅಬ್ಬರಿಸಿದೆ. ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.