ಕಾರಂಜಾ ಜಲಾಶಯದಿಂದ ನೀರು ಸರಬರಾಜು: ಡಿ.ಸಿ ಭೇಟಿ

ಬೀದರ.ಮಾ.31: ಕಾರಂಜಾ ಜಲಾಶಯದಿಂದ ಅಂದಾಜು 110 ಕಿ.ಮೀ ದೂರದಲ್ಲಿರುವ ಹಾಲಹಳ್ಳಿ ಬ್ಯಾರೇಜ ವರೆಗೆ ನೀರನ್ನು ತಲುಪಿಸುವ ಕಾರ್ಯಾಚರಣೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕಾರಂಜಾ ಜಲಾಶಯದಿಂದ ದಾಡಗಿ ಬ್ಯಾರೇಜ್ ಮೂಲಕ ಭಾಲ್ಕಿ ನಗರಕ್ಕೆ ನೀರು ಕಳುಹಿಸಲು ಮತ್ತು ಹಾಲಹಳ್ಳಿ ಬ್ಯಾರೆಜನಿಂದ ಔರಾದ್ ಪಟ್ಟಣಕ್ಕೆ ನೀರು ಕಳುಹಿಸುವ ಉದ್ದೇಶದಿಂದ 0.09 ಟಿಎಂಸಿ ನೀರನ್ನು ಮಾರ್ಚ 27ರ ರಾತ್ರಿ 7 ಗಂಟೆಗೆ ಕಾರಂಜಾ ಜಲಾಶಯದಿಂದ ಬಿಡುಗಡೆ ಮಾಡಲಾಗಿದೆ.
ಮಾರ್ಚ 28ರಂದು ಇಡೀ ದಿನ ಮತ್ತು ಮಾರ್ಚ 29ರ ಸಂಜೆ 7 ಗಂಟೆವರೆಗೆ ನೀರನ್ನು ಬಿಡಿಸಲಾಗುವುದು ಎಂದು ತಿಳಿಸಿದರು.
ನೀರು ಸಂಚರಿಸುವ ಮಧ್ಯೆದಲ್ಲಿನ 13 ಬ್ಯಾರೇಜಗಳಲ್ಲಿ ನೀರನ್ನು ಕನಿಷ್ಟ ಪ್ರಮಾಣದಲ್ಲಿ ತುಂಬಿಸಿ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಅಂತರ್ಜಲದ ಪುನಶ್ಚೇತನವೂ ಕೂಡ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣವು ದಿನೇದಿನೆ ಹೆಚ್ಚುತ್ತಿದೆ. ಹೀಗಾಗಿ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ: ದಿನೇದಿನೆ ನೀರು ಪಾತಾಳಾಕ್ಕೆ ಹೋಗುತ್ತಲೆ ಇದೆ. ಜೀವಜಲವನ್ನು ಅನವಶ್ಯಕವಾಗಿ ಯಾರು ಕೂಡ ಪೆÇೀಲು ಮಾಡಬಾರದು. ನೀರನ್ನು ಮಿತವಾಗಿ ಬಳಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನೀರು ಸುಗಮವಾಗಿ ಸಾಗಲು ಕ್ರಮ: ಕಾರಂಜಾ ನದಿಗೆ ಅಡ್ಡಲಾಗಿ ಅಂತರ್ಜಲ ಅಭಿವೃದ್ದಿ ಮತ್ತು ಸಣ್ಣ ನೀರಾವರಿ ಇಲಾಖೆ ಮತ್ತು ಕೃಷ್ಣ ಭಾಗ್ಯ ಜಲನಿಗಮದಿಂದ ನಿರ್ಮಿಸಲಾದ ಸೇತುವೆಗಳು ಬ್ರಿಡ್ಜ್ ಕಂ ಬ್ಯಾರೇಜಗಳ ಹಾಗೂ ಮಹಾರಾಷ್ಡ್ರದಿಂದ ನಿರ್ಮಿಸಲಾದ ಸಿಂದಿಕಮಟ ಬ್ಯಾರೇಜನ ಗೇಟುಗಳನ್ನು ತೆರೆದು ನೀರು ಸುಗಮವಾಗಿ ಸಾಗಲು ಕ್ರಮ ತೆಗೆದುಕೊಳ್ಳಬೇಕೆಂದು ಈಗಾಗಲೇ ಸಂಬಂಧಿಸಿದವರಿಗೆ ಸೂಚಿಸಿ ಕ್ರಮ ವಹಿಸಲಾಗಿದೆ ಎಂದು ಇದೆ ವೇಳೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರರಾದ ರವಿಕಿರಣ್ ಪೆಬ್ಬಾ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಭಾಲ್ಕಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಶ ಮೇಧಾ, ವಿವಿದ ಇಲಾಖೆಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.