ಕಾರಂಜಾ ಜಲಾಶಯಕ್ಕೆ ಮನೆ-ಮಠ ಬಿಟ್ಟು ಕೊಟ್ಟ ಸಂತ್ರಸ್ತರ ಭೂಮಿ ಒತ್ತುವರಿ: ಗಾಯದ ಮೇಲೆ ಬರೆ ಎಳೆದ ಬೇಜವಾಬ್ದಾರಿ ಅಧಿಕಾರಿಗಳು

ಬೀದರ:ಡಿ.26: ಆ ಜನ ಇಡೀ ಜಿಲ್ಲೆಗೆ ನೀರು ಕುಡಿಸಲು ತಮ್ಮ ಮನೆ-ಮಠ ಕಳೆದುಕೊಂಡಿದ್ದರು. ಇದ್ದಿದ್ದ ಎಲ್ಲವನ್ನು ಕಳೆದುಕೊಂಡ ಅವರಿಗೆ ವಾಸವಿರಲು ಸರ್ಕಾರ ಒಂದಿಷ್ಟು ಜಾಗ ಕೊಟ್ಟಿತ್ತು. ಆದರೆ ಆ ಜಾಗದ ಮೇಲೂ ಈಗ ಭೂಗಳ್ಳರ ಕರಿನೆರಳು ಬಿದಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜಲಾಶಯಕ್ಕಾಗಿ ಭೂಮಿ ಕೊಟ್ಟ ಸಂತ್ರಸ್ತರ ಜಾಗದಲ್ಲಿ ದೊಡ್ಡ ಕುಳಗಳ ದೊಡ್ಡ ಕಟ್ಟಡಗಳು ನಿರ್ಮಾಣಗೊಂಡಿವೆ.
ಒಂದು ಕಡೆ ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ಬಡಪಾಯಿ ಕುಟುಂಬಗಳ ತಗಡಿನ ಶೆಡ್​ನಲ್ಲಿ ಜೀವನ; ಮತ್ತೊಂದು ಕಡೆ ಜಾಗ ಕಬ್ಜಾ (ಒತ್ತುವರಿ) ಮಾಡಿ ಬಿಲ್ಡಿಂಗ್​ ಕಟ್ಟಿಕೊಂಡು ಆರಾಮಾಗಿರುವ ಭೂಗಳ್ಳರು. ಹೌದು! ಇಂತಹ ದೃಶ್ಯಗಳು ಕಂಡು ಬಂದಿದ್ದು ಗಡಿ ಜಿಲ್ಲೆ ಬೀದರ್​ನ ಹಳ್ಳಿಖೇಡ್​ ಪುರಸಭೆ ವ್ಯಾಪ್ತಿಯಲ್ಲಿ.
ಕಾರಂಜಾ ಜಲಾಶಯ ನಿರ್ಮಾಣದ ವೇಳೆ ಹಳ್ಳಿಖೇಡ್​ ಭಾಗದ ಡಾಕುಳಗಿ, ಹಜ್ಜರ್ಗಿ ಸೇರಿದಂತೆ ಕೆಲ ಗ್ರಾಮದವರು ಸಾವಿರಾರು ಎಕರೆ ಭೂಮಿ, ಮನೆ-ಮಠ ಕಳೆದುಕೊಂಡಿದ್ದರು. ಇಂತಹ ಸಂತ್ರಸ್ತರಿಗೆ ಎಂತಲೇ ಹಳ್ಳಿಖೇಡ್​ (ಬಿ) ಗ್ರಾಮದ ಸರ್ವೆ ನಂ. 7, 8 ರಲ್ಲಿ 29 ಎಕರೆ 25 ಗುಂಟೆ ಜಮೀನು ಮೀಸಲಿಡಲಾಗಿತ್ತು. ಆದರೆ ಮೀಸಲಿಟ್ಟ ಭೂಮಿಯನ್ನು ಹಂಚಲು ಅಧಿಕಾರಿಗಳು ಮುಂದಾಗಲಿಲ್ಲ. ಹೀಗಾಗಿ ಡಾಕುಳಗಿ, ಹಜ್ಜರ್ಗಿ ಸೇರಿದಂತೆ ಕೆಲ ಗ್ರಾಮಗಳ ಮನೆಗಳಿಗೆ ನೀರು ನುಗ್ಗುತ್ತಿದ್ದಂತೆ ತಗಡಿನ ಶೆಡ್ ಗಳಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡಿಕೊಟ್ಟಿದ್ದರು. ತದನಂತರ ಇಂದಿನವರೆಗೂ ಯಾವೊಬ್ಬ ಅಧಿಕಾರಿಗಳು ಸಹ ಆ ಕಡೆ ತಿರುಗಿ ನೋಡಿಲ್ಲ. ಇದರಿಂದ ಸಂತ್ರಸ್ತರು ಮೂಲಭೂತ ಸೌಕರ್ಯಗಳಿಲ್ಲದೆ ತಗಡಿನ ಶೆಡ್ ನಲ್ಲಿಯೇ ಬದುಕು ಸವೆಸಬೇಕಾಗಿದೆ.

ಇನ್ನು ಇತ್ತಕಡೆ ಸಂತ್ರಸ್ತರಿಗೆಂದು ಮೀಸಲಿಟ್ಟ 29 ಎಕರೆ 25 ಗುಂಟೆ ಜಾಗದ ಮೇಲೆ ಭೂಗಳ್ಳರ ಕರಿನೆರಳು ಬಿದ್ದಿದ್ದು, ಸಂತ್ರಸ್ತರಿಗೆ ನೀಡಬೇಕಾದ ಭೂಮಿ ಒತ್ತುವರಿಯಾಗಿದೆ. ಕೆಲ ಪ್ರಭಾವಿಗಳು ಈಗಾಗಲೇ ದೊಡ್ಡ ದೊಡ್ಡ ಬಿಲ್ಡಿಂಗ್​ಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಸಂತ್ರಸ್ತರಿಗಾಗಿ ಇರುವ ಭೂಮಿಯಲ್ಲಿ ಅವ್ಯವಹಾರ ನಡೆದಿದೆ. ಮೂಲ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಇದಕ್ಕಾಗಿ ಸಮಿತಿ ರಚಿಸಬೇಕು ಎಂದು ಬಸವಕಲ್ಯಾಣ ಎಸಿ ರಮೇಶ್ ಬಿ.ಸಿ 2009ರಲ್ಲೇ ಅಂದಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನು ಈ ಬಗ್ಗೆ ಹಳ್ಳಿಖೇಡ್​ ಪುರಸಭೆ ಮುಖ್ಯಾಧಿಕಾರಿಗಳಿಗೆ ಕೇಳಿದರೆ ಸಂತ್ರಸ್ತರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಅಕ್ರಮ ನಡೆದಿರೋದು ಸತ್ಯ. ಅಲ್ಲದೆ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ ಎನ್ನುತ್ತಾರೆ.

ಒಟ್ಟಿನಲ್ಲಿ ಕಾರಂಜಾ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡವರಿಗಾಗಿ ಇಲ್ಲಿ ಮೀಸಲಿಟ್ಟಿದ್ದ 29 ಎಕರೆ 25 ಗುಂಟೆ ಜಾಗದಲ್ಲಿ ಸ್ಕೂಲ್​, ಉದ್ಯಾನವನ​, ಬಸ್​ ನಿಲ್ದಾಣ ಕೂಡ ನಿರ್ಮಾಣವಾಗಬೇಕಿತ್ತು. ಆದರೆ ಭೂ ಮಾಫಿಯಾಗಳು, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಂತ್ರಸ್ತರ ಮೇಲೆ ಸತತ ಅನ್ಯಾಯ ನಡೆಯುತ್ತಿದೆ. ಈಗಲಾದರೂ ಜಿಲ್ಲಾಧಿಕಾರಿಗಳು ಸಮಿತಿ ರಚಿಸಿ ಭೂಗಳ್ಳರಿಗೆ ತಕ್ಕ ಪಾಠ ಕಲಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಿಸಬೇಕಾಗಿದೆ.