ಕಾರಂಜಾ ಜಲಾಶಯಕ್ಕೆ ಕಂಟಕವಾಗಲಿರುವ ರಂಜೋಳ ಖೇಣಿ ಬಳಿಯ ಆಕ್ರಮ ಮೀನು ಸಾಕಾಣಿಕೆ ಕೇಂದ್ರ?

ವಿಶೇಷ ವರದಿ
ಶಿವಕುಮಾರ ಸ್ವಾಮಿ
ಬೀದರ್:ಸೆ.14: ಜಿಲ್ಲೆಯ ರೈತರ ಜೀವನಾಡಿ ಕಾರಂಜಾ ಡ್ಯಾಂ ಆಗಿದ್ದು, ಈ ಡ್ಯಾಂ ಬಳಿಯಲ್ಲಿರುವ ಖೇಣಿ ರಂಜೋಳ ಬಳಿ ಅಕ್ರಮವಾಗಿ ಮೀನು ಸಾಕಾಣಿಕೆ ನಡೆಯುತ್ತಿದ್ದು, ಈ ಮೀನುಗಳಿಗೆ ಆಹಾರವಾಗಿ ನಾನ್ ವೆಜ್ ಹೋಟಲ್‍ಗಳ ಅಳಿದುಳಿದ ತ್ಯಾಜ್ಯ ಆಹಾರ ಡ್ಯಾಂಗೆ ಸುರಿಯುತ್ತಿರುವುದರಿಂದ ಜಿಲ್ಲೆಯ ಜನ ಕಲುಷಿತ ನೀರು ಕುಡಿಯುವ ಆತಂಕ ಎದುರಾಗಿದೆ.

ಹೈದ್ರಾಬಾದ್ ಮೂಲಕ ವ್ಯಕ್ತಿಯೊಬ್ಬ ಜಿಲ್ಲಾ ಮೀನುಗಾರಿಕೆ ಇಲಾಖೆಯಿಂದ ಅನುಮತಿ ಪಡೆಯದೆ ಅಕ್ರಮವಾಗಿ ಖೇಣಿ ರಂಜೋಳ ಬಳಿ ಡ್ಯಾಂ ಸುತ್ತಲು ಹೊಂಡ ನಿರ್ಮಾಣ ಮಾಡಿ ಅವುಗಳಲ್ಲಿ ಕ್ಯಾಟ್ ಫೀಶ್ ಮರಿಗಳನ್ನು ಬಿಟ್ಟಿದ್ದು, ಅವುಗಳಿಗೆ ಆಹಾರವಾಗಿ ಪ್ರತಿ ದಿನ ಹೈದ್ರಾಬಾದ್ ನಾನ್ ವೆಜ್ ಹೋಟೆಲ್ ಗಳ ಅಳಿದುಳಿದ ನಾನ್ ವೆಜ್ ತ್ಜಾಜ್ಯ ಆಹಾರವನ್ನು ಸಾಗಾಣಿಕೆ ಮಾಡಲು ಅಲ್ಲಿ ಟೆಂಡರ್ ಪಡೆದು ಅದನ್ನು ಟ್ಯಾಂಕರ್ ಮೂಲಕ ಅಲ್ಲಿ ಸುರಿಯಲಾಗುತ್ತಿದೆ.

ಕಳೆದ ವರ್ಷ ಕ್ಯಾಟ್ ಫೀಶನ್ನು ಖೇಣಿ ರಂಜೋಳ, ಮರ್ಕಲ್ ಬಳಿ ಬೆಳೆದಿದ್ದು ಅದಕ್ಕೆ ಹೈದ್ರಾಬಾದ್‍ನ ನಾನ್ ವೆಜ್ ಹೋಟಲ್ ಗಳಲ್ಲಿ ಅಳಿದುಳಿದ ನಾನ್ ವೆಜ್ ಆಹಾರವನ್ನು ಟ್ಯಾಂಕರ್ ಮುಖಾಂತರ ತಂದು ದಿನಾಲು ಸುರಿಯುತ್ತಿದ್ದರು. ಅದು ಕಾರಂಜಾ ಡ್ಯಾಂ ಒಳಗೂ ಸೇರಿತ್ತು. ಮಾಧ್ಯಮಗಳ ಸುದ್ದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೆ ಅವುಗಳನ್ನು ನಾಶ ಮಾಡಿ ಪ್ರಕರಣ ದಾಖಲು ಮಾಡಿತ್ತು. ಇದರಿಂದ ಮೀನು ಸಾಗಾಣಿಕೆ ಬಂದ್ ಆಗಿತ್ತು.

ಕಾರಂಜಾ ಡ್ಯಾಂ ನಲ್ಲಿ ಈಗಲು ಸಹಸ್ರಾರು ಸಂಖ್ಯೆಯಲ್ಲಿ ಡ್ಯಾಂ ಒಳಗೆ ಕ್ಯಾಟ್ ಫೀಶ್ ಸೇರಿವೆ, ಈಗ ಮತ್ತೆ ಅಲ್ಲಿ ಅಕ್ರಮವಾಗಿ ಕ್ಯಾಟ್ ಫೀಶ್ ಸಾಗಾಣಿಕೆ ತಲೆ ಎತ್ತಿದೆ. ಈ ಸಲ ಕ್ಯಾಟ್ ಪೀಶ್ ಅಲ್ಲ ಸಾಧಾರಣ ಮೀನುಗಳನ್ನು ಬೆಳಸುತ್ತೇವೆಂದು ಹೈದ್ರಾಬಾದ್ ಮೂಲಕ ವ್ಯಕ್ತಿಯೊಬ್ಬ ಮೀನುಗಾರಿಕೆ ಇಲಾಖೆಯಿಂದಾಗಲಿ, ಕಾರಂಜಾ ಅಧಿಕಾರಿಗಳಿಂದಾಗಲಿ ಅನುಮತಿ ಪಡೆಯದೆ ಸಾಧಾರಣ ಮೀನುಗಳ ಸೋಗಿನಲ್ಲಿ ಕ್ಯಾಟ್ ಪೀಶ್ ಮೀನುಗಳನ್ನು ಬೆಳಸಲು ಮುಂದಾಗಿದ್ದಾನೆ. ಜೊತೆಗೆ ಪ್ರತಿ ದಿನ ಹೈದ್ರಾಬಾದ್ ನಾನ್ ವೆಜ್ ಹೋಟೆಲ್ ಗಳ ಅಳಿದುಳಿದ ನಾನ್ ವೆಜ್ ಆಹಾರವನ್ನು ಸಾಗಾಣಿಕೆ ಮಾಡಲು ಅಲ್ಲಿ ಟೆಂಡರ್ ಪಡೆದು ಹೋಟಲ್ ತ್ಯಾಜ್ಯವನ್ನು ಟ್ಯಾಂಕರ್ ಮುಖಾಂತರ ತಂದು ಸುರಿಯಲಾರಂಭಿಸಿದ್ದಾನೆ. ಕರ್ನಾಟಕ ರಾಜ್ಯದ ವಿವಿಧಡೆ ಎರಡು ನೂರು ಎಕರೆ ಪ್ರದೇಶದಲ್ಲಿ ಈತ ಮೀನಿ ಬೆಳೆಯುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

ದಿನಾಲು ಎನಿಲ್ಲವೆಂದರೂ ಹೈದ್ರಾಬಾದ್ ನಗರದ ನಾನ್ ವೆಜ್ ಹೋಟಲ್ ಗಳಲ್ಲಿ ಉಳಿದ ನಾನ್ ವೆಜ್ ತ್ಯಾಜ್ಯ ಡ್ಯಾಂ ಸೇರುತ್ತಿದ್ದು, ಈ ಕಲುಷಿತ ನೀರು ಈ ಭಾಗದ ಜನ ಕುಡಿಯುವ ಅನಿವಾರ್ಯತೆ ಎದುರಾಗಿದೆ. ಬೀದರ್ ಜಿಲ್ಲೆಗೆ ಕುಡಿಯುವ ನೀರಿನ ಮೂಲ ಈ ಕಾರಂಜಾ ಡ್ಯಾಂ. ಆದರೆ, ಕಾರಂಜಾ ಡ್ಯಾಂ ನ ಖೇಣಿ ರಂಜೋಳ ಬಳಿ ಮತ್ತೆ ಮೀನು ಸಾಕಾಣಿಕೆ ಹೊಲಗಳು ತಲೆ ಎತ್ತಿದ್ದು ಆಘಾತಕಾರಿ ಬೆಳವಣಿಗೆ. ಕೆಲ ಅಧಿಕಾರಿಗಳು ಈ ಅಕ್ರಮಕ್ಕೆ ಸಾಥ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಮೀನುಗಾರಿಕೆ ಇಲಾಖೆ, ಕಾರಂಜಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಯಾವುದೇ ಕ್ರಮಕೈಗೊಳ್ಳದೆ ಇರುವುದರಿಂದ ಹೈದ್ರಾಬಾದ್ ಮೂಲದ ವ್ಯಕ್ತಿ ಅಕ್ರಮವಾಗಿ ಕ್ಯಾಟ್ ಫೀಶ್ ಮರಿಗಳನ್ನು ಸಾಗಾಣಿಕೆ ಮಾಡುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಅಕ್ರಮ ಮೀನು ಸಾಗಾಣಿಕೆಗೆ ಬ್ರೇಕ್ ಹಾಕಬೇಕಾಗಿದೆ.

ಕಾಟಾಚಾರಕ್ಕೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಅಧಿಕಾರಿಗಳು ಅಕ್ರಮ ಸಾಗಾಣಿಕದಾರರ ವಿರುದ್ಧ ಎಫ್‍ಐಆರ್ ದಾಖಲಿಸಿ ಕ್ಯಾಟ್ ಫೀಶ್ ನಾಶ ಮಾಡಬೇಕಾಗಿದೆ. ಈ ಅಕ್ರಮಕ್ಕೆ ಕೈ ಜೋಡಿಸಿರುವ ಸ್ಥಳೀಯರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.