ಕಾಯ್ದ ಕಬ್ಬಿಣವಾದ ಕಮ್ಮಾರರ ಬದುಕು

ಬಾಬು ಅಲಿ ಕರಿಗುಡ್ಡ
ದೇವದುರ್ಗ.ನ.೪-ಕೊರೊನಾ ವೈರಸ್ ತಡೆಗೆ ಸರ್ಕಾರ ವಿಧಿಸಿದ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಸೇರಿ ವಿವಿಧ ಉಪಕಸುಬು ನಂಬಿ ಜೀವನ ನಡೆಸುತ್ತಿದ್ದವರ ಬದುಕು ದುಸ್ಥರವಾಗಿದೆ. ಅದರಲ್ಲೂ ರೈತರನ್ನೇ ನಂಬಿ ಉದ್ಯೋಗ ಕಂಡುಕೊಂಡಿದ್ದ ಕಮ್ಮಾರರು ಬದುಕು ಅಕ್ಷರಶಃ ನಲುಗಿದೆ.
ಬೈಲುಗಂಬಾರರು, ಕಮ್ಮಾರರು ಎಂದು ಗುರುತಿಸಿಕೊಂಡ ಕುಲುಮೆ ವೃತ್ತಿ ಮಾಡುವ ಜನರನ್ನು ಅಲೆಮಾರಿ ಕುಟುಂಬ. ೧೫ದಿನ ಅಥವಾ ತಿಂಗಳಿಗೊಮ್ಮೆ ಊರಿಂದ ಊರಿಗೆ ಸಂಚರಿಸಿ ಅಲ್ಲಿ ತಮ್ಮ ಉದ್ಯೋಗ ಹುಡುಕಿ ಜೀವನ ನಡೆಸುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಎರಡು ತಿಂಗಳು ಬಹುತೇಕ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಕಮ್ಮಾರರು ಬಡತನ ಎನ್ನುವ ಕೊಲುಮೆಯಲ್ಲಿ ಬೆಂದಿದ್ದಾರೆ.
ಪಟ್ಟಣದ ಟಿಎಪಿಎಂಸಿ ಮೈದಾನದಲ್ಲಿ ಸುಮಾರು ಮೂರು ತಿಂಗಳಿನಿಂದ ನೆಲೆಸಿರುವ ಆರುಕ್ಕೂ ಹೆಚ್ಚು ಕಮ್ಮಾರರ ಕುಟುಂಬಗಳು ಜೀವನ ನಡೆಸಲು ತೀವ್ರ ಸಂಕಟ ಎದುರಿಸುತ್ತಿವೆ. ಲಾಕ್‌ಡೌನ್ ಸಮಯದಲ್ಲಿ ಕೆಲ ಸಂಘಟನೆಗಳು ಜೀವನಕ್ಕಾಗಿ ಧಾನ್ಯ ನೀಡಿದ್ದು, ಬಿಟ್ಟರೆ ಸರ್ಕಾರದಿಂದ ಬಿಡಿಗಾಸು ಪರಿಹಾರ ಬಂದಿಲ್ಲ. ಉದ್ಯೋಗವಿಲ್ಲದೆ ಭೀಕ್ಷೆ ಬೇಡಿ ಜೀವನ ನಡೆಸುವಂತಾಗಿದೆ ಎಂದು ಕಮ್ಮಾರ ತೋತಾರಾಮ್ ಅಳಲು ತೋಡಿಕೊಂಡರು.
ಕೃಷಿ ಚಟುವಟಿಕೆ ಸುಗಮವಾಗಿ ನಡೆದರೆ ಕುಂಠಿ, ನೇಗಿಲು, ಕೊಡಲಿ, ಕುಡುಗೋಲು, ಕುಂಟಿಕುಡ, ಕುರ್ಚಿಗಿ, ಹಾರಿ, ಪಿಕಾಶಿ ಸೇರಿ ವಿವಿಧ ಕೃಷಿ ಸಲಕರಣೆಗಳನ್ನು ಬೆಂಕಿಯಲ್ಲಿ ಕಾಯಿಸಿ, ಬಡಿದು ಚೂಪ ಮಾಡಿಕೊಡುತ್ತಾರೆ. ಕೊಡಲಿ, ಕುಡುಗೋಲು, ಕುರ್ಚಿಗೆ ಅಣಿಯಲು ೨೫-೩೦ರೂ. ಪಡೆದರೆ, ಕುಂಟಿ, ಕುಡ ಅಣಿಯಲು ೧೫೦-೨೦೦ ರೂ. ಕೂಲಿ ಪಡೆಯುತ್ತಾರೆ. ಹೊಸ ಕೊಡಲಿ ಮಾಡಿಕೊಡಲು ೨೦೦ರೂ. ಪಡೆಯುತ್ತಾರೆ.
ಲಾಕ್‌ಡೌನ್ ಸಮಯದಲ್ಲಿ ಕೃಷಿ ಚಟುವಟಿಕೆಗಳು ನಡೆಯದ ಕಾರಣ ರೈತಾಪಿ ವರ್ಗ ಇವರ ಬಳಿ ಕೆಲಸಕ್ಕಾಗಿ ಬಂದಿಲ್ಲ. ಇದರಿಂದ ಆ ಸಮಯದಲ್ಲಿ ಕೆಲಸವಿಲ್ಲದೆ ಕಮ್ಮಾರರು ತೀವ್ರ ಸಂಕಷ್ಟ ಎದುರಿಸಿದ್ದಾರೆ. ಸುಮಾರ ಆರು ಕುಟುಂಬದಲ್ಲಿ ನಾಲ್ವರು ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಸೇರಿ ಇಬ್ಬರು ಮಕ್ಕಳು ಸೇರಿ ೧೫ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಆದರೆ, ಇವರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ದುಬಾರಿ;
ಸರ್ಕಾರದ ಜನಪ್ರತಿಯ ಯೋಜನೆಗಳಾದ ಜನಧನ್, ಉಜ್ವಲ್, ಕರೊನಾ ಪರಿಹಾರ ಸೇರಿ ವಿವಿಧ ಯೋಜನೆಗಳು ಈ ಕುಟುಂಬಕ್ಕೆ ತಲುಪಿಲ್ಲ. ರೇಷನ್ ಕಾರ್ಡ್ ಇಲ್ಲದ ಕಾರಣ ನ್ಯಾಯಬೆಲೆ ಅಂಗಡಿಯಿಂದ ದೊರೆಯುವ ಪಡಿತರ ಧಾನ್ಯಗಳು ಸಿಗುತ್ತಿಲ್ಲ. ಎಲ್ಲ ಕಡೆ ಗ್ಯಾಸ್ ಸಿಲೇಂಡ್ ಬಳಸುತ್ತಿರುವ ಕಾರಣ ಕುಲುಮೆ ನಡೆಸಲು ಇದ್ದಿಲು ಸಿಗುತ್ತಿಲ್ಲ. ಇದು ಇವರ ಬದುಕಿಗೆ ಸಂಕಷ್ಟ ತಂದಿದೆ. ಇದ್ದಲಿಗಾಗಿ ಮನೆಮನೆ, ಗ್ರಾಮೀಣ ಭಾಗದ ಗಲ್ಲಿಗಲ್ಲಿ ಸುತ್ತುವಂತಾಗಿದೆ. ಒಂದು ಚೀಲಗೆ ೫೦೦ರೂ. ದೊಡ್ಡ ಗೋಣಿ ಚೀಲಕ್ಕೆ ೧೦೦೦ರೂ ಬೆಲೆಯಿದೆ. ಪಟ್ಟಣದಲ್ಲಿ ಇದ್ದಲಿ ಸಿಗುವುದೇ ಇಲ್ಲ. ಇದ್ದಲಿಗಾಗಿ ಅಲೆಯುವ ಸ್ಥಿತಿಯಿದೆ. ಸಂಕಷ್ಟ ಸಮಯದಲ್ಲಿ ಅಷ್ಟು ಹಣ ಎಲ್ಲಿಂದ ತರಬೇಕು ಎಂದು ಕಮ್ಮಾರರು ನೋವು ತೋಡಿಕೊಂಡಿದ್ದಾರೆ.

ಕೋಟ್=========

ಲಾಕ್‌ಡೌನ್ ಜಾರಿಯಿಂದ ನಮ್ಮ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಉದ್ಯೋಗ ನಂಬಿ ಬದುಕಲು ಕೆಲಸ ಸಿಗುತ್ತಿಲ್ಲ. ನಮ್ಮಂಥ ಬೀದಿ ಬದಿ ವಾಸಿಸುವ ಅಲೆಮಾರಿ ಕುಟುಂಬಗಳನ್ನು ಸಂಕಷ್ಟ ಎದುರಿಸುತ್ತಿವೆ. ಸರ್ಕಾರ ಹಾಗೂ ತಾಲೂಕು ಆಡಳಿತ ನಮ್ಮಂಥ ಕುಟುಂಬಗಳನ್ನು ಗುರುತಿಸಿ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಭೀಕ್ಷೆ ಬೇಡಿ ಜೀವನ ನಡೆಸುವ ಸ್ಥಿತಿ ಬರಲಿದೆ.

| ತೂತಾರಾಮ್

ಕಮ್ಮಾರ ವೃತ್ತಿ ಮಾಡುವವರು

ಕೋಟ್========

ಅಲೆಮಾರಿ ಕಮ್ಮಾರ ವೃತ್ತಿ ಮಾಡುವ ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ಯೋಜನೆಗಳಿಲ್ಲ. ಲಾಕ್‌ಡೌನ್ ಸಮಯದಲ್ಲಿ ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳಿಂದ ಅವರಿಗೆ ದವಸಧಾನ್ಯಗಳನ್ನು ನೀಡಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ಎಲ್ಲರಿಗೂ ಕಷ್ಟವಾಗಿದೆ. ಎಲ್ಲರಿಗೂ ಪರಿಹಾರ ನೀಡುವುದು ಕಷ್ಟ.
ಮಧುರಾಜ್ ಯಾಳಗಿ