ಕಾಯ್ದೆ ತಿದ್ದುಪಡಿ ಹಿಂಪಡೆದಿರುವುದು ರೈತ ಹೋರಾಟಕ್ಕೆ ಸಂದ ಜಯ

ಧಾರವಾಡ, ನ21: ಕೃಷಿ ಸಂಬಂಧಿತ ಮೂರು ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವುದು ಈ ದೇಶದ ರೈತರ ಹೋರಾಟಕ್ಕೆ ಸಂದ ಜಯ ಎಂದು ರೈತ ಹಿತರಕ್ಷಣಾ ಪರಿವಾರದ ಮುಖಂಡ ಪಿ.ಎಚ್.ನೀರಲಕೇರಿ ಅಭಿಪ್ರಾಯಪಟ್ಡರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕವು ಸೇರಿದಂತೆ ರಾಷ್ಟ್ರದ ಎಲ್ಲೆಡೆ ರೈತರು ಕರಾಳ ಕಾನೂನು ವಿರೋಧಿಸಿ ಒಂದು ವರ್ಷ ನಿರಂತರ ಹೋರಾಟ ನಡೆಸಿದರು. ಕೇಂದ್ರದ ಬಿಜೆಪಿ ನಿರಂಕುಶ ಪ್ರಭುತ್ವದ ನಾಗಪುರ ಪ್ರೇರಿತ ಮೋದಿ ಸರಕಾರ ಈ ಅನಾಹುತಕ್ಕೆ ಮೋದಿ ಕಾರಣ.
ಐದು ರಾಜ್ಯಗಳ ಚುನಾವಣೆ ಎಂದು ಹೇಳದೇ ಗುರುನಾನಕ್ ಜಯಂತಿ ಸಂದರ್ಭದಲ್ಲಿ ಮೂರು ವಿವಾದಿತ ಕಾನೂನುಗಳನ್ನು ಹಿಂಪಡೆಯಲಾಯಿತು. ಈ ದೇಶದ ರೈತರ ಮೇಲೆ ಹಲ್ಲೆ ಮಾಡಿ ಕೀಳಾಗಿ ನಡೆದುಕೊಂಡು ರೈತಕುಲಕ್ಕೆ ಅವಮಾನ, ನಕ್ಸಲ್, ಜಿಹಾದಿ, ಖಲಿಸ್ತಾನ ಎಂದು ಹೀಯಾಳಿಸಲಾಯಿತು. ಈಗ ಅವರೇ ಕಾನೂನು ವಾಪಸ್ಸು ಪಡೆದು ರೈತರ ಹೋರಾಟಕ್ಕೆ ತಲೆಬಾಗಿ ಪಶ್ಚಾತ್ತಾಪಪಟ್ಟಂತಾಗಿದೆ.
ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಸಹಕಾರ ಕಾಯ್ದೆ ಚಳಿಗಾಲದ ಅಧಿವೇಶನದಲ್ಲಿ ತರಲು ಹೊರಟಿದೆ, ವಿದ್ಯುತ್ ಕಾಯ್ದೆ ಹತ್ತು ಎಚ್‍ಪಿ ಅಡ್ವಾನ್ಸ್ ಮೀಟರ್ ಅಳವಡಿಕೆಯನ್ನು ವಿರೋಧಿಸುತ್ತೇವೆ. ಹದಿನೈದು ವರ್ಷಗಳ ಟ್ರ್ಯಾಕ್ಟರ್‍ಗಳನ್ನು ಗುಜರಿ ಹಾಕಬೇಕೆಂದು ಸರಕಾರ ಹೇಳುತ್ತಿರುವುದು ಸರಿಯಲ್ಲ. ಆದ್ದರಿಂದ ರೈತರಿಗೆ ತೊಂದರೆಯಾಗಿದ್ದು, ಹೀಗಾಗಿ ಮೋಟಾರು ವಾಹನ ಕಾಯ್ದೆ ಹಿಂಪಡೆಯಬೇಕು.
ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡ್ತಿನಿ ಎಂದು ಹೇಳಿ ಎಂಟು ವರ್ಷ ಆದರೂ ಈವರೆಗೆ ಜಾರಿಗೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಭಾವನಾತ್ಮಕವಾಗಿ ಸ್ಪಂದಿಸದೇ 700 ರೈತರನ್ನು ಕೊಂದಿದ್ದಾರೆ. ಸಚಿವರು 7 ರೈತರನ್ನು ಗಾಡಿ ಹಾಯಿಸಿ ಕೊಂದಿರುವ ನೇರ ಹೊಣೆಯನ್ನು ಸರಕಾರವೇ ಹೊತ್ತುಕೊಳ್ಳಬೇಕು. ರೈತ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಂಡವಾಳಶಾಹಿಗಳ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಕೃಷಿ ವಿರೋಧಿ ಕಾನೂನನ್ನು ಜಾರಿಗೆ ಯತ್ನಿಸಿದರು. ಹೀಗಾಗಿ ಮೋದಿಯವರು ಈಗ ರೈತರ ವಿಶ್ವಾಸ ಕಳೆದುಕೊಂಡಿದ್ದಾರೆ. ಆದ್ದರಿಂದ ರೈತರ ಋಣ ತೀರಿಸಬೇಕಾದರೆ ಸಂಪೂರ್ಣ ಮನ್ನಾ ಮಾಡಬೇಕು ಎಂದರು.
ಮುಖಂಡರಾದ ಶಿವಾನಂದ ಹೊಳೆಹಡಗಲಿ, ಗುರುರಾಜ ಹುಣಸಿಮರದ, ಅಪ್ಪೇಶ ದಳವಾಯಿ, ಎಂ.ಎಫ್.ಹಿರೇಮಠ, ಸಿದ್ದಣ್ಣ ಕಂಬಾರ, ಶ್ರೀಶೈಲಗೌಡ ಕಮತರ, ಬಸವರಾಜ ನಾಯ್ಕರ, ಭೀಮಪ್ಪ ಕಾಸಾಯಿ, ರಮೇಶಗೌಡ ಪಾಟೀಲ, ಶಂಕರ ದೊಡ್ಡಮನಿ, ರಾಮಚಂದ್ರ ತಾವರೆನವರ ಸುದ್ದಿಗೋಷ್ಠಿಯಲ್ಲಿದ್ದರು.