ಕಾಯ್ದೆಗಳ ತಿದ್ದುಪಡಿ, ಪರಿಹಾರದಲ್ಲಿ ತಾರತಮ್ಯ ವಿರೋಧಿಸಿ ರಸ್ತೆ ತಡೆ: ರೈತ ಮುಖಂಡರ ಬಂಧನ

ಕಲಬುರಗಿ.ನ.05: ಭೂಸುಧಾರಣಾ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ, ವಿದ್ಯುತ್ ಮಸೂದೆ ತಿದ್ದುಪಡಿ ವಿರೋಧಿಸಿ ಹಾಗೂ ಅತಿವೃಷ್ಟಿ ಪರಿಹಾರದಲ್ಲಿ ಸರ್ಕಾರದ ತಾರತಮ್ಯ ವಿರೋಧಿಸಿ ಗುರುವಾರ ನಗರದ ಜಗತ್ ವೃತ್ತದಲ್ಲಿ ಅಖಿಲ ಭಾರತ್ ಕಿಸಾನ್ ಸಂಘರ್ಷ ಸಮಿತಿಯ ಕಾರ್ಯಕರ್ತರು ರಸ್ತೆ ತಡೆ ಚಳುವಳಿ ಮಾಡಿದಾಗ ಪೋಲಿಸರು ತೀವ್ರ ವಿರೋಧದ ಮಧ್ಯೆ 50ಕ್ಕಿಂತ ಹೆಚ್ಚು ರೈತ ಮುಖಂಡರನ್ನು ಬಂಧಿಸಿ ಕರೆದೊಯ್ದರು.

ಈ ಸಂದರ್ಭದಲ್ಲಿ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದರು.
ಬೆಂಗಳೂರಿನಲ್ಲಿ ಮಳೆ ಬಂದ 24 ಗಂಟೆಗಳಲ್ಲಿ 25000ರೂ.ಗಳ ಪರಿಹಾರವನ್ನು ತಕ್ಷಣ ಘೋಷಿಸಲಾಗಿದೆ. ಆದಾಗ್ಯೂ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಅತಿಯಾದ ಮಳೆ ಹಾಗೂ ಭೀಕರ ಪ್ರವಾಹದಿಂದಾಗಿ ಜನ ನಲುಗಿ ಹೋದರೂ ಸಹ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ 10,000ರೂ.ಗಳ ಘೋಷಣೆ ಮಾಡಲಾಗಿದೆ. ಅದೂ ಕೂಡ ಸಂತ್ರಸ್ತರ ಕೈ ತಲುಪಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರವು ಪರಿಹಾರ ಘೋಷಣೆಯಲ್ಲಿಯೂ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಸರ್ಕಾರ ಮಲತಾಯಿ ಧೋರಣೆಯನ್ನು ಕೈಬಿಟ್ಟು ಕೂಡಲೇ ಅತಿವೃಷ್ಟಿಗೆ ತುತ್ತಾದ ಪ್ರದೇಶದಲ್ಲಿ ಹಾನಿ ಸರ್ವೆ ಮಾಡಿ ಪ್ರತಿ ಎಕರೆಗೆ 25000ರೂ.ಗಳ ಪರಿಹಾರ ಘೋಷಿಸುವಂತೆ, ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಜೊತೆಗೆ ಪುನರ್ ವಸತಿ ಕೇಂದ್ರ ಮಂಜೂರು ಮಾಡುವಂತೆ ಅವರು ಒತ್ತಾಯಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿಗಳು ರೈತರ ಮರಣ ಶಾಸನ ಬರೆಯಲು ಹೊರಟಿದೆ ಎಂದು ಕಿಡಿಕಾರಿದ ಅವರು, ಕೂಡಲೇ ರೈತ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಯನ್ನು ಕೈಬಿಡುವಂತೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ಜಟಾಪಟಿ: ವಿವಿಧ ರೈತಪರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಸ್ತೆ ತಡೆ ಚಳುವಳಿ ಆರಂಭಿಸಿದಾಗ ಪೋಲಿಸರು ಅದನ್ನು ಮೊಟಕುಗೊಳಿಸಲು ಯತ್ನಿಸಿದರು. ಇದರಿಂದ ಕುಪಿತರಾದ ರೈತ ಮುಖಂಡರು ಪೋಲಿಸರೊಂದಿಗೆ ವಾಗ್ದಾದಕ್ಕೆ ಇಳಿದು, ಬೇಡಿಕೆಗೆ ಸ್ಪಂದಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದರು. ಕೊನೆಗೆ ಪೋಲಿಸರು ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಅವರನ್ನು ಬಂಧಿಸಲು ಮುಂದಾದಾಗ ಅದಕ್ಕೆ ಆಕ್ಷೇಪಿಸಿದರು. ಇದರಿಂದ ಒಂದು ಹಂತದಲ್ಲಿ ಮಮಶೆಟ್ಟಿ ಅವರು ರಸ್ತೆ ಮೇಲೆ ಮಲಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೋಲಿಸರು ಅವರನ್ನು ಎತ್ತಿಕೊಂಡು ಹೋಗಿ ಪೋಲಿಸ್ ವಾಹನದಲ್ಲಿ ಹಾಕಿದರು.
ಸಮಿತಿಯ ಜಿಲ್ಲಾ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ಭೀಮಾಶಂಕರ್ ಮಾಡಿಯಾಳ್, ಮಹೇಶ್ ಎಸ್.ಬಿ., ಮೊಹ್ಮದ್ ಮೊಖದಮ್, ಜಗದೇವಿ ಹೆಗಡೆ, ಅರ್ಜುನ್ ಗೊಬ್ಬೂರ್, ಬಸ್ಸುಗೌಡ ಪಾಟೀಲ್, ಪಾಂಡುರಂಗ್ ಮಾವಿನಕರ್ ಸೇರಿದಂತೆ 50ಕ್ಕಿಂತ ಹೆಚ್ಚು ಮುಖಂಡರನ್ನು ಬಂಧಿಸಿ ಕೊಂಡೊಯ್ದರು.